ಭುವನೇಶ್ವರ: ಒಡಿಶಾದ ಮಾವೋವಾದಿ ನಕ್ಸಲ್ ಪೀಡಿತ ಮಲ್ಕಂಗಿರಿ ಜಿಲ್ಲೆಯಲ್ಲಿ ಒಂದು ಡಜನ್ ಬುಡಕಟ್ಟು ಜನ ಅಪರಿಚಿತ ಕಾಯಿಲೆಯಿಂದ ಮೂರು ತಿಂಗಳ ಅವಧಿಯಲ್ಲಿ ಕನಿಷ್ಠ ಹತ್ತು ಮಂದಿ ಸಾವನ್ನಪ್ಪಿದ್ದಾರೆ.
ಕಳೆದ ಮೂರು ತಿಂಗಳಲ್ಲಿ ಮಲ್ಕಂಗಿರಿ ಜಿಲ್ಲೆಯ ಹಳ್ಳಿಯೊಂದರಲ್ಲಿ ಅಪರಿಚಿತ ಕಾಯಿಲೆಯಿಂದ 10 ಮಂದಿ ಸಾವನ್ನಪ್ಪಿದ್ದಾರೆ. ಮಾತಲಿ ಬ್ಲಾಕ್ ವ್ಯಾಪ್ತಿಯ ಸೋಡಿಗುಂಡ ಗ್ರಾಮದಲ್ಲಿ 10 ಬುಡಕಟ್ಟು ಜನಾಂಗದವರು ನಿಗೂಢ ಕಾಯಿಲೆಗೆ ಸಾವನ್ನಪ್ಪಿದ್ದು ವೈದ್ಯಕೀಯ ತಂಡ ಗ್ರಾಮಕ್ಕೆ ಭೇಟಿ ನೀಡಿ ಜನರ ರಕ್ತದ ಮಾದರಿಯನ್ನು ಸಂಗ್ರಹಿಸಿ ಪರೀಕ್ಷಿಸಿದೆ ಎಂದು ಮಲ್ಕಂಗಿರಿ ಜಿಲ್ಲಾಧಿಕಾರಿ ಮನೀಶ್ ಅಗರ್ ವಾಲ್ ತಿಳಿಸಿದ್ದಾರೆ.
ಈ ಪ್ರದೇಶದಲ್ಲಿ ಲಭ್ಯವಿರುವ ಕುಡಿಯುವ ನೀರಿನ ಮಾದರಿಯನ್ನು ಪರೀಕ್ಷೆ ನಡೆಸಲಾಗಿದೆ. ಸಾವಿಗೆ ನಿಖರವಾದ ಕಾರಣ ತಿಳಿದುಬಂದಿಲ್ಲ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.
ಬುಡಕಟ್ಟು ಜನಾಂಗದ ಕೆಲವರಲ್ಲಿ ಸಣ್ಣ ನೋವಿನೊಂದಿಗೆ ಪ್ರಾರಂಭವಾಗುವ ಕಾಯಿಲೆ ಹಸಿವು ತಡೆಯುತ್ತದೆ. ವಾರದೊಳಗೆ ಕಾಯಿಲೆಗೆ ತುತ್ತಾದವರು ಮೃತಪಡುತ್ತಾರೆ. ದಿನದಿಂದ ದಿನಕ್ಕೆ ದುರ್ಬಲರಾಗಿ ಕಾಯಿಲೆಗೆ ತುತ್ತಾದವರು ಸಾವನ್ನಪ್ಪುತ್ತಿರುವುದು ಆತಂಕ ಹೆಚ್ಚಿಸಿದೆ ಎಂದು ಗ್ರಾಮಸ್ಥರೊಬ್ಬರು ಹೇಳಿದ್ದಾರೆ.
14 ಗ್ರಾಮಸ್ಥರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು ಅವರಲ್ಲಿ ರಕ್ತಹೀನತೆ ಕಂಡುಬಂದಿದೆ. ಮಲೇರಿಯಾದಂತಹ ಲಕ್ಷಣಗಳು ಗೋಚರಿಸಿವೆ ಎಂದು ಜಿಲ್ಲಾ ವೈದ್ಯಕೀಯ ಅಧಿಕಾರಿ ಡಾ. ಪಿ.ಕೆ. ನಂದಾ ಹೇಳಿದ್ದಾರೆ.
ಮಲ್ಕಂಗಿರಿ ಬ್ಲಾಕ್ ನ ಕೆಂಡುಗುಡಾ ಗ್ರಾಮದಲ್ಲಿ 15 ಜನ ಇದೇ ರೀತಿ ನಿಗೂಢವಾದ ಕಾಯಿಲೆಗೆ ಸಾವನ್ನಪ್ಪಿದ್ದಾರೆ. ಅಪೌಷ್ಟಿಕತೆ ಕಾರಣದಿಂದ ಸಾವುಗಳು ಸಂಭವಿಸಿರಬಹುದೆಂದು ಹೇಳಲಾಗಿದ್ದರೂ ನಿಗೂಢ ಕಾಯಿಲೆ ಆತಂಕ ಮೂಡಿಸಿದೆ ಎನ್ನಲಾಗಿದೆ.