
ಬೆಂಗಳೂರು: ರೈತರಿಗೆ ಮೂರು ಲಕ್ಷ ರೂಪಾಯಿವರೆಗೆ ಶೂನ್ಯ ಬಡ್ಡಿದರದಲ್ಲಿ ಬೆಳೆ ಸಾಲ ನೀಡಲು ಸಹಕಾರ ಇಲಾಖೆ ಆದೇಶಿಸಿದೆ. ಪ್ರಸಕ್ತ ಸಾಲಿನ ಅಲ್ಪಾವಧಿ ಬೆಳೆ ಸಾಲ ನೀಡಲು ಸೂಚಿಸಿದ್ದು ರಾಜ್ಯಾದ್ಯಂತ ಪತ್ತಿನ ಸಹಕಾರಿ ಸಂಸ್ಥೆಗಳಲ್ಲಿ ಅರ್ಜಿ ಸಲ್ಲಿಸಿ ಶೂನ್ಯ ಬಡ್ಡಿ ದರದಲ್ಲಿ 3 ಲಕ್ಷ ರೂಪಾಯಿವರೆಗೆ ರೈತರು ಬೆಳೆ ಸಾಲ ಪಡೆಯಬಹುದಾಗಿದೆ ಎಂದು ಹೇಳಲಾಗಿದೆ.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಡಿಸಿಸಿ ಬ್ಯಾಂಕ್ ಶಾಖೆಗಳು, ಪಿಕಾರ್ಡ್ ಬ್ಯಾಂಕುಗಳಲ್ಲಿ ಬೆಳೆಸಾಲ ನವೀಕರಣ ಮತ್ತು ಹೊಸ ಸಾಲ ಪಡೆಯಲು ಅಗತ್ಯ ಅರ್ಜಿಗಳ ವಿತರಣೆಗೆ ಸೂಚನೆ ನೀಡಲಾಗಿದೆ.
ಸಾಲದ ಅರ್ಜಿಗಳನ್ನು ಸ್ವೀಕಾರ ಮಾಡಿದ ನಂತರ ಸಾಲ ಮಂಜೂರಾದ ವಿವರಗಳನ್ನು ನಮೂದಿಸಲು ಪ್ರತ್ಯೇಕ ರಿಜಿಸ್ಟರ್ ನಿರ್ವಹಣೆ ಮಾಡಬೇಕು. ಸೆಪ್ಟೆಂಬರ್ 20 ರೊಳಗೆ ಡಿಸಿಸಿ ಬ್ಯಾಂಕ್ ಗಳ ಒಟ್ಟು ಸದಸ್ಯರು, ಹೊಸ ಸದಸ್ಯರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಸದಸ್ಯರಿಗೆ ವಾರ್ಷಿಕವಾಗಿ ನೀಡುವ ಗುರಿಯನ್ನು ನಿಗದಿಪಡಿಸಿ ಕಚೇರಿಗೆ ಕಳುಹಿಸಬೇಕು ಎಂದು ಹೇಳಲಾಗಿದೆ.