ಬೆಂಗಳೂರು: ಸ್ಯಾಂಡಲ್ ವುಡ್ ಗೆ ಡ್ರಗ್ಸ್ ಮಾಫಿಯಾ ನಂಟು ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ ದ್ವಿವೇದಿ ಸೇರಿ 5 ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ಹೊರಡಿಸುತ್ತಿದ್ದಂತೆ ನಟಿ ರಾಗಿಣಿ ತನಗೆ ಅನಾರೋಗ್ಯ ಸಮಸ್ಯೆ ಇದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸುವಂತೆ ಮನವಿ ಮಾಡಿದ್ದಾರೆ.
ಪ್ರಕರಣದ ಆರೋಪಿಗಳಾದ ನಟಿ ರಾಗಿಣಿ, ಸಂಜನಾ, ರಾಹುಲ್, ಪ್ರಶಾಂತ್ ರಂಕ, ಲೂಮ್ ಪೆಪ್ಪರ್, ನಿಯಾಜ್ ಅವರ ಸಿಸಿಬಿ ಕಸ್ಟಡಿ ಅವಧಿ ಇಂದು ಅಂತ್ಯವಾದ ಹಿನ್ನಲೆಯಲ್ಲಿ ಸಿಸಿಬಿ ಅಧಿಕಾರಿಗಳು ಎಲ್ಲಾ ಆರೋಪಿಗಳನ್ನು 1ನೇ ಎಸಿಎಂಎಂ ನ್ಯಾಯಾಲಯಕ್ಕೆ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರು ಪಡಿಸಿದ್ದರು.
ಈ ವೇಳೆ ನಟಿ ಸಂಜನಾ ಹೊರತು ಪಡಿಸಿ ನಟಿ ರಾಗಿಣಿ ಸೇರಿದಂತೆ ಐವರು ಆರೋಪಿಗಳನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಜಡ್ಜ್ ಆದೇಶ ಹೊರಡಿಸಿದ್ದಾರೆ. ಕೋರ್ಟ್ ಆದೇಶ ಹೊರ ಬೀಳುತ್ತಿದ್ದಂತೆಯೇ ನಟಿ ರಾಗಿಣಿ ತನಗೆ ಬೆನ್ನು ನೋವು ಹಾಗೂ ಅಸ್ತಮಾ ಸಮಸ್ಯೆಯಿದ್ದು ತನ್ನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸುವಂತೆ ಮನವಿ ಮಾಡಿದ್ದಾರೆ.
ಆದರೆ ರಾಗಣಿ ಮನವಿಯನ್ನು ಒಪ್ಪದ ನ್ಯಾಯಾಧೀಶರು ಜ್ಯುಡಿಶಿಯಲ್ ಕಸ್ಟಡಿ ಬಳಿಯೇ ವೈದ್ಯರು ಲಭ್ಯವಿದ್ದು, ಅಲ್ಲಿಯೇ ಚಿಕಿತ್ಸೆ ಪಡೆಯುವಂತೆ ಹೇಳಿದ್ದಾರೆ. ಅಲ್ಲದೇ ಜೈಲು ಆಸ್ಪತ್ರೆಯಲ್ಲಿ ರಾಗಿಣಿ ಅವರಿಗೆ ಸೂಕ್ತ ಚಿಕಿತ್ಸೆ ಕೊಡಿಸುವಂತೆ ರಾಗಿಣಿ ಪರ ವಕೀಲರಿಗೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.