ನವದೆಹಲಿ: ಕೊರೊನಾ ಸಂಕಷ್ಟದ ನಡುವೆ ಕರ್ತವ್ಯ ನಿರ್ವಹಿಸಬೇಕಾದ ಸ್ಥಿತಿಯಿದೆ. ಗಡಿಯಲ್ಲಿ ಚೀನಾ ವಿರುದ್ಧ ಹೋರಾಡುತ್ತಿರುವ ಸೈನಿಕರಿಗಾಗಿ ಎಲ್ಲಾ ಸಂಸದರು ಒಗ್ಗಟ್ಟು ಪ್ರದರ್ಶಿಸಬೇಕಿದೆ. ಅಧಿವೇಶನದ ಮೂಲಕ ಸೇನೆಯ ಜತೆ ಇಡೀ ದೇಶವಿದೆ ಎಂಬ ಸಂದೇಶ ರವಾನಿಸಬೇಕಿದೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.
ಇಂದಿನಿಂದ ಸಂಸತ್ ಮುಂಗಾರು ಅಧಿವೇಶನ ಆರಂಭವಾಗಿದ್ದು, ಅಧಿವೇಶನಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಧಾನಿ ಮೋದಿ, ನಮ್ಮ ಸಂಸದರು ಇಂತಹ ಕಠಿಣ ಪರಿಸ್ಥಿತಿಯಲ್ಲೂ ಕರ್ತವ್ಯವನ್ನು ಆಯ್ಕೆ ಮಾಡಿಕೊಂಡಿದ್ದಕ್ಕೆ ಧನ್ಯವಾದ ಹೇಳುತ್ತೇನೆ. ದೇಶ ರಕ್ಷಣೆಗಾಗಿ ಸೈನಿಕರು ಸಂಕಷ್ಟದ ಸ್ಥಿತಿಯಲ್ಲಿ ಹೋರಾಡುತ್ತಿದ್ದಾರೆ. ನಿಮ್ಮ ಜತೆ ನಾವಿದ್ದೇವೆ ಎಂಬ ಒಕ್ಕೋರಲ ಸಂದೇಶವನ್ನು ಈ ಅಧಿವೇಶನದಲ್ಲಿ ರವಾನಿಸುವ ವಿಶ್ವಾಸವಿದೆ ಎಂದರು.
ಅಧಿವೇಶನದಲ್ಲಿ ಹಲವು ವಿಷಯಗಳ ಬಗ್ಗೆ ಗಹನವಾದ ಚರ್ಚೆಗಳು ನಡೆಯಲಿವೆ. ಎಷ್ಟು ಆಳವಾದ ಚರ್ಚೆಗಳು ನಡೆಯುತ್ತೋ ಅಷ್ಟು ಸದನ ಮತ್ತು ದೇಶಕ್ಕೆ ಲಾಭವಾಗಲಿದೆ. ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಸದನಗಳಲ್ಲಿ ಹಲವು ನಿಯಮಗಳನ್ನ ರೂಪಿಸಲಾಗಿದ್ದು, ಎಲ್ಲರೂ ಪಾಲಿಸಬೇಕು ಎಂದು ತಿಳಿಸಿದರು.
ಇನ್ನು ಕೊರೊನಾ ಸೋಂಕಿನ ಬಗ್ಗೆ ಯಾವುದೇ ನಿರ್ಲಕ್ಷ್ಯ ಬೇಡ. ನಮ್ಮ ವಿಜ್ಞಾನಿಗಳು ಶೀಘ್ರದಲ್ಲಿ ಲಸಿಕೆ ಕಂಡುಹಿಡಿಯುವಲ್ಲಿ ಯಶಸ್ವಿಯಾಗಲಿದ್ದಾರೆ. ಪ್ರಪಂಚದ ಯಾವುದೇ ಭಾಗದಲ್ಲಿ ಕೊಕೋವಿಡ್ ಲಸಿಕೆ ಕಂಡು ಹಿಡಿದರೂ ಸಂತಸದ ವಿಚಾರ ಎಂದು ಹೇಳಿದರು.