ವರ್ಷಾಂತ್ಯಕ್ಕೆ ಕೊರೊನಾ ಲಸಿಕೆ ಅಮೆರಿಕದಲ್ಲಿ ಲಭ್ಯವಾಗುವ ಸಾಧ್ಯತೆ ಇದೆ ಎಂದು ಫಿಜರ್ ಸಿಇಒ ಹೇಳಿದ್ದಾರೆ. ಪ್ರಸಕ್ತ ವರ್ಷ ಮುಗಿಯುವ ಮೊದಲೇ ಕೊರೊನಾ ಲಸಿಕೆಯನ್ನು ಅಮೆರಿಕ ಮಾರುಕಟ್ಟೆಯಲ್ಲಿ ಸಿಗುವಂತೆ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವುದಾಗಿ ಅಮೆರಿಕದ ಔಷಧ ತಯಾರಿಕಾ ಕಂಪನಿ ಫಿಜರ್ ತಿಳಿಸಿದೆ.
ಜರ್ಮನ್ ಕಂಪನಿ ಬಯೋ ಎನ್ ಟೆಕ್ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲಾಗಿರುವ ಕೊರೊನಾ ಲಸಿಕೆ ಸ್ಪರ್ಧೆಯಲ್ಲಿ ಮುಂಚೂಣಿಯಲ್ಲಿದೆ. ಅಮೆರಿಕದಲ್ಲಿ ಮೂರನೇ ಹಂತದ ಪ್ರಯೋಗದಲ್ಲಿ ಲಸಿಕೆ ಬಳಕೆಯಾಗುತ್ತಿದೆ. ಉತ್ತಮ ಫಲಿತಾಂಶ ನಿರೀಕ್ಷೆಯಲ್ಲಿ ಲಸಿಕೆ ಉತ್ಪಾದನೆ ಮಾಡಲಾಗಿದೆ ಎಂದು ಫಿಜರ್ ಕಂಪನಿ ಸಿಇಓ ಅಲ್ಬರ್ಟ್ ಬೌರ್ಲಾ ಹೇಳಿದ್ದಾರೆ.
ಲಸಿಕೆ ಪರಿಣಾಮಕಾರಿಯಾಗಿ ಇದೆಯೇ ಇಲ್ಲವೇ ಎಂಬುದು ಅಕ್ಟೋಬರ್ ವೇಳೆಗೆ ತಿಳಿಯುವ ನಿರೀಕ್ಷೆ ಇದೆ ಎಂದು ಅವರು ಈ ಮೊದಲೇ ತಿಳಿಸಿದ್ದನ್ನು ಪುನರುಚ್ಛರಿಸಿ, ಅಕ್ಟೋಬರ್ ವೇಳೆಗೆ ಲಸಿಕೆ ಎಷ್ಟು ಪರಿಣಾಮಕಾರಿಯಾಗಿದೆ ಎಂಬುದನ್ನು ತಿಳಿಯಲು ಶೇಕಡ 60 ರಷ್ಟು ಅವಕಾಶವಿದೆ. ಪ್ರಯೋಗಗಳಿಗಾಗಿ 30 ಸಾವಿರ ಜನರ ಆರಂಭಿಕ ನೋಂದಣಿಯಾಗಿದ್ದು ಇನ್ನು 14 ಸಾವಿರ ಜನರ ನೋಂದಣಿ ಮಾಡಿಸಲಾಗುವುದು. ಅಮೆರಿಕ ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ ಕೊರೊನಾ ಲಸಿಕೆಗೆ ತುರ್ತು ಅನುಮತಿ ನೀಡಲು ಸಿದ್ಧತೆ ನಡೆಸಿದೆ ಎಂಬುದನ್ನು ಕೂಡ ಅವರು ತಿಳಿಸಿದ್ದಾರೆ.