ಭಾನುವಾರದಂದು ನಡೆದ ನೀಟ್ ಪರೀಕ್ಷೆಗಾಗಿ ವಿದ್ಯಾರ್ಥಿಯೊಬ್ಬ 700 ಕಿ.ಮೀ. ದೂರದಿಂದ ಪ್ರಯಾಸಪಟ್ಟುಕೊಂಡು ಬಂದರೂ ಸಹ ಕೇವಲ ಹತ್ತು ನಿಮಿಷ ತಡವಾದ ಕಾರಣಕ್ಕೆ ಪರೀಕ್ಷೆಯನ್ನು ಮಿಸ್ ಮಾಡಿಕೊಂಡಿದ್ದಾನೆ. ಇಂತಹದೊಂದು ಘಟನೆ ಪಶ್ಚಿಮ ಬಂಗಾಳದ ಕೊಲ್ಕತ್ತಾದಲ್ಲಿ ನಡೆದಿದೆ.
ಬಿಹಾರದ ದರ್ಭಾಂಗ ಜಿಲ್ಲೆಯ ಸಂತೋಷ್ ಕುಮಾರ್ ಯಾದವ್ ಕೊಲ್ಕತ್ತಾದಲ್ಲಿ ನೀಟ್ ಪರೀಕ್ಷೆ ಬರೆಯಬೇಕಿತ್ತು. ಇದಕ್ಕಾಗಿ ಆತ ಎರಡು ಬಸ್ಸುಗಳನ್ನು ಬದಲಿಸಿ ಏಳು ನೂರು ಕಿಮೀ ದೂರದ ಪರೀಕ್ಷಾ ಕೇಂದ್ರವನ್ನು ತಲುಪಿದ್ದ.
ಪರೀಕ್ಷೆ 2 ಗಂಟೆಗೆ ಆರಂಭವಾಗುತ್ತಿತ್ತಾದರೂ 1-30 ರೊಳಗೆ ಅಭ್ಯರ್ಥಿಗಳು ಹಾಜರಿರಬೇಕಿತ್ತು. ಸಂತೋಷ್ ಕುಮಾರ್ ಯಾದವ್ 1-40 ಕ್ಕೆ ಪರೀಕ್ಷಾ ಕೇಂದ್ರ ತಲುಪಿದ್ದ. ಈ ಹಿನ್ನೆಲೆಯಲ್ಲಿ ಆತನಿಗೆ ಪ್ರವೇಶ ನೀಡಲು ಅಧಿಕಾರಿಗಳು ನಿರಾಕರಿಸಿದ್ದಾರೆ ಹೀಗಾಗಿ ಸಂತೋಷ್ ಕುಮಾರ್ ಯಾದವ್ ತನ್ನ ಶೈಕ್ಷಣಿಕದ ಒಂದು ವರ್ಷವನ್ನು ಕಳೆದುಕೊಳ್ಳಬೇಕಾಗಿದೆ.