ಬೆಂಗಳೂರು: ಸ್ಯಾಂಡಲ್ ವುಡ್ ಗೆ ಡ್ರಗ್ಸ್ ಮಾಫಿಯಾ ನಂಟಿನ ಬೆನ್ನಲ್ಲೇ ಶಾಸಕ ಜಮೀರ್ ಅಹ್ಮದ್ ಅವರ ಕೊಲಂಬೋ ಪ್ರವಾಸ ರಾಜಕೀಯವಾಗಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ನಡುವೆ ಶಾಸಕ ಜಮೀರ್ ಅಹ್ಮದ್ ಕ್ಯಾಸಿನೋಗೆ ಯಾರ ಜತೆ ಹೋಗಿದ್ದರು ಎಂಬುದು ಮುಖ್ಯವಲ್ಲ, ಅವರು ಡ್ರಗ್ಸ್ ವ್ಯವಹಾರದಲ್ಲಿ ಭಾಗಿಯಾಗಿದ್ದರೆ ತಪ್ಪು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಜಮೀರ್ ಡ್ರಗ್ಸ್ ವ್ಯವಹಾರದಲ್ಲಿ ಭಾಗಿಯಾಗಿದ್ದರೆ ಅದು ತಪ್ಪು. ಹೊರತು ಅವರು ಕೊಲಂಬೋಗೆ ಹೋಗಿದ್ದರೆ ಅದರಲ್ಲಿ ತಪ್ಪಿಲ್ಲ. ಅವರು ಕೊಲಂಬೋಗೆ ಯಾರ ಜತೆಯಲ್ಲಿ ಹೋಗಿದ್ದಾರೆ ಎಂಬುದು ಮುಖ್ಯವಲ್ಲ. ಕ್ಯಾಸಿನೋಗೆ ಹೋದರೆ ಅದು ಅಪರಾಧವಲ್ಲ. ಅವರು ಡ್ರಗ್ಸ್ ನಲ್ಲಿ ಇದ್ದರಾ? ಇದ್ದರೆ ಅದು ತಪ್ಪು ಎಂದು ಹೇಳಿದರು.
ನಾನು ಕೂಡ ವಿದೇಶಗಳಿಗೆ ಹೋದಾಗ ಕ್ಯಾಸಿನೋ ಆಡುವ ಜಾಗ ನೋಡಿದ್ದೇನೆ. ಹಾಗಂತ ನಾನು ಅಲ್ಲಿ ಆಡಿಲ್ಲ. ಅದೇ ರೀತಿ ಜಮೀರ್ ಹೋಗಿದ್ದರೆ ಅದು ಅಪರಾಧವಲ್ಲ ಎಂದರು.
ಡ್ರಗ್ಸ್ ಮಾಫಿಯಾ ಹಲವು ವರ್ಷಗಳಿಂದ ಇದೆ. ಇದು ಸಮಾಜಕ್ಕೆ ಕಂಟಕ. ಈ ಬಗ್ಗೆ ನಿಸ್ಪಕ್ಷಪಾತವಾಗಿ ತನಿಖೆ ನಡೆಯಬೇಕು. ಸರ್ಕಾರ ತನ್ನ ವೈಫಲ್ಯ ಮುಚ್ಚಿಕೊಳ್ಳಲು ಈ ಪ್ರಕರಣವನ್ನು ರಾಜಕೀಯ ದುರುದ್ದೇಶಕ್ಕೆ ಬಳಸಿಕೊಳ್ಳಬಾರದು ಎಂದು ಹೇಳಿದರು.