ನವದೆಹಲಿ: ಯುರೋಪ್ ನ ಎಷ್ಟೋನ್ ನ ವಿಶ್ವ ಸಂಚಾರಿಯೊಬ್ಬರು ಕಾಲ್ನಡಿಗೆಯಲ್ಲಿ ಭಾರತದಲ್ಲಿ ಸಂಚಾರ ಮಾಡಿದ ಅನುಭವವನ್ನು ರೆಡಿಟ್ ಎಂಬ ಜಾಲತಾಣದಲ್ಲಿ ಐದು ವರ್ಷದ ನಂತರ ಹಂಚಿಕೊಂಡಿದ್ದಾರೆ.
ಯೂಟ್ಯೂಬರ್ ಕೂಡ ಆಗಿರುವ ಮಿಗೋ ಮಾರ್ಕ್ 2015- 16 ರಲ್ಲಿ ನಡೆದುಕೊಂಡೇ ಭಾರತದಲ್ಲಿ ಒಟ್ಟು 3600 ಕಿಮೀ ಸಂಚಾರ ಮಾಡಿದ್ದರು.
“ಬಸ್, ರೈಲು, ಬೈಕ್ ಯಾವುದೂ ಇಲ್ಲ. ಶೇ. 100ರಷ್ಟು ನಡೆದುಕೊಂಡೇ ಸಾಗಿದೆ. ರಾಜಸ್ತಾನದಲ್ಲಿ 36 ಸೆಲ್ಶಿಯಸ್ ಉಷ್ಣಾಂಶದಲ್ಲಿಯೂ ನಡೆದಿದ್ದೆ. ಒಟ್ಟು 35 ಭಾರತೀಯರ ಮನೆಯಲ್ಲಿ ವಾಸ್ತವ್ಯ ಮಾಡಿ ಆತಿಥ್ಯ ಪಡೆದಿದ್ದೆ. ಅಸ್ಸಾಂನಲ್ಲಿ ಸಶಸ್ತ್ರ ಭದ್ರತಾ ಪಡೆಗಳು ನನಗೆ ಭದ್ರತೆ ನೀಡಿದ್ದರು. ಒಂದೆಡೆ ನಾಯಿ ದಾಳಿಯೂ ಆಗಿತ್ತು. ಅಂತಾರಾಷ್ಟ್ರೀಯ ಕ್ರೀಡಾ ಪಟು ಮೇರಿ ಕೋಮ್ ಅವರನ್ನು ಭೇಟಿಯಾಗಿ ಚರ್ಚಿಸಿದ್ದು ಒಂದೊಳ್ಳೆ ಅನುಭವ. ಮಹಾತ್ಮಾ ಗಾಂಧಿ ಅವರ ಆಶ್ರಮಕ್ಕೂ ಭೇಟಿ ಕೊಟ್ಟಿದ್ದೆ. ನವರಾತ್ರಿ, ದೀಪಾವಳಿ ಎಲ್ಲ ಹಬ್ಬಗಳ ಸಂದರ್ಭದಲ್ಲಿಯೂ ಜತೆಯಾದೆ ಎಂದು ವಿವರಿಸಿದ್ದು, ಫೋಟೋಗಳನ್ನು ಹಂಚಿಕೊಂಡಿದ್ದಾರೆ.