ದಿನ ದಿನಕ್ಕೂ ಹೆಚ್ಚಾಗ್ತಿರುವ ಕೊರೊನಾ ಮಧ್ಯೆಯೇ ಭಾರತೀಯರಿಗೆ ಖುಷಿ ಸುದ್ದಿಯೊಂದು ಸಿಕ್ಕಿದೆ. ಸ್ಥಳೀಯ ಕೊರೊನಾ ಲಸಿಕೆ ತಯಾರಕ ಕಂಪನಿ ಭಾರತ್ ಬಯೋಟೆಕ್, ಪ್ರಾಣಿಗಳ ಮೇಲೆ ಕೋವಿಡ್ – 19 ಲಸಿಕೆ ಕೊವಾಕ್ಸಿನ್ ಯಶಸ್ವಿಯಾಗಿ ಪರೀಕ್ಷಿಸಿರುವುದಾಗಿ ಘೋಷಿಸಿದೆ.
ಹೈದರಾಬಾದ್ ಮೂಲದ ಸಂಸ್ಥೆ ಟ್ವೀಟ್ ಮಾಡಿ ಈ ವಿಷ್ಯ ತಿಳಿಸಿದೆ. ಭಾರತ್ ಬಯೋಟೆಕ್ ಹೆಮ್ಮೆಯಿಂದ ಕೊವಾಕ್ಸಿನ್‌ನ ಪ್ರಾಣಿ ಅಧ್ಯಯನ ಫಲಿತಾಂಶಗಳನ್ನು ಬಿಡುಗಡೆ ಮಾಡುತ್ತದೆ. ಈ ಫಲಿತಾಂಶಗಳು ಲಸಿಕೆಯ ಪರಿಣಾಮವನ್ನು ಲೈವ್ ವೈರಲ್ ಚಾಲೆಂಜ್ ಮಾದರಿಯಲ್ಲಿ ತೋರಿಸುತ್ತೇವೆ ಎಂದು ಹೇಳಿದೆ.
ಮಂಗಗಳ ಮೇಲೆ ಕಂಪನಿ ಪ್ರಯೋಗ ಮಾಡಿದೆ. ಮಾನವರ ಮೇಲೆ ಮೊದಲ ಹಂತದ ಪ್ರಯೋಗ ಯಶಸ್ವಿಯಾಗಿದೆ. ಈಗ ಎರಡನೇ ಹಂತದ ಪ್ರಯೋಗಕ್ಕೆ ಡಿಸಿಜಿಐನಿಂದ ಅನುಮತಿ ಕೋರಲಾಗಿದೆ. ಸದ್ಯದಲ್ಲಿಯೇ ಎರಡನೇ ಹಂತದ ಪ್ರಯೋಗ ನಡೆಯಲಿದೆ. ಮೊದಲ ಹಂತದಲ್ಲಿ 12 ನಗರಗಳಲ್ಲಿ ಲಸಿಕೆ ಪ್ರಯೋಗಗಳನ್ನು ನಡೆಸಿತು. ಈ ಸಂದರ್ಭದಲ್ಲಿ 375 ಜನರು ಭಾಗವಹಿಸಿದ್ದರು. ಭಾರತದಲ್ಲಿ ಮೂರು ಕಂಪನಿಗಳು ಕೊರೊನಾ ಲಸಿಕೆ ಕಂಡು ಹಿಡಿಯುವ ಪ್ರಯತ್ನ ನಡೆಸುತ್ತಿವೆ.