ಕೊರೊನಾ ವೈರಸ್‌ನಿಂದ ಜಗತ್ತಿನಾದ್ಯಂತ ಎಲ್ಲ ರೀತಿಯ ವ್ಯಾಪಾರ ವಹಿವಾಟುಗಳಿಗೆ ದೊಡ್ಡ ಪೆಟ್ಟು ಬಿದ್ದಿದೆ. ಆದರೆ ಇದೇ ವೇಳೆ ಸ್ವಾವಲಂಬಿಗಳಾಗಿ ಬದುಕುವುದು ಹೇಗೆಂದು ಕಲಿಯಲು ಈ ಲಾಕ್‌ಡೌನ್ ಸಮಯ ಸ್ಪೂರ್ತಿಯಾಗುತ್ತಿದೆ ಎಂದರೆ ತಪ್ಪಾಗಲಾರದು.
ಕಳೆದ ಏಳೆಂಟು ತಿಂಗಳುಗಳಿಂದ ದಿಗ್ಬಂಧನದಲ್ಲಿರುವ ಜನರು ಬೋರ್ ಆಗದಂತೆ ಮಾಡಿಕೊಳ್ಳಲು ತಮ್ಮಲ್ಲಿರುವ ಕ್ರಿಯಾಶೀಲತೆಯನ್ನು ಒರೆಗೆ ಹಚ್ಚಿ ಹೊಸ ಹೊಸ ಹ್ಯಾಕ್ ಗಳನ್ನು ಪತ್ತೆ ಮಾಡುತ್ತಿದ್ದಾರೆ. ಪಂಜಾಬ್‌ನ ಝಿರಾಕ್ಪುರದ ಧನಿರಾಮ್ ಸಗ್ಗು ಇವರ ಸಾಲಿಗೆ ಹೊಸದಾಗಿ ಸೇರಿಕೊಂಡಿದ್ದಾರೆ.
ಮಾರ್ಚ್‌ನಿಂದ ದೇಶಾದ್ಯಂತ ವಕ್ಕರಿಸಿರುವ ಲಾಕ್‌ಡೌನ್ ಕಾರಣದಿಂದ ತಮ್ಮ ಉದ್ಯೋಗವನ್ನು ಕಳೆದುಕೊಂಡ ಧನಿರಾಮ್, ’ಆತ್ಮನಿರ್ಭರತೆ’ ಸಾಧಿಸಲು ನೋಡುತ್ತಿರುವ ಎಲ್ಲರಿಗೂ ಮಾದರಿಯಾಗಿದ್ದಾರೆ. ಪರಿಸರ ಸ್ನೇಹಿಯಾಗಿ ಮರದಿಂದ ಬೈಸಿಕಲ್ ನಿರ್ಮಿಸಿರುವ ಧನಿರಾಮ್, ತಮ್ಮ ಈ ಹೊಸ ಅವಿಷ್ಕಾರದ ಕಾರಣದ ಕೆನಡಾದಿಂದ ಹೊಸ ಹೊಸ ಆರ್ಡರ್ ಗಳನ್ನು ಪಡೆಯುತ್ತಿದ್ದಾರೆ. ಏಪ್ರಿಲ್‌ನಿಂದ ಈ ಬೈಸಿಕಲ್ ಮೇಲೆ ಕೆಲಸ ಆರಂಭಿಸಿದ ಧನಿರಾಮ್, ಪ್ಲೈವುಡ್ ನಿಂದ ಈ ಬೈಸಿಕಲ್ ನಿರ್ಮಿಸಿದ್ದು, 15,000 ರೂ.ಗಳಿಗೆ ಮಾರಾಟ ಮಾಡಿದ್ದಾರೆ.