ನವದೆಹಲಿ: ನೌಕರರ ಭವಿಷ್ಯ ನಿಧಿ(ಇಪಿಎಫ್) ಬಡ್ಡಿ ಕಡಿತ ಮಾಡದಿರಲು ಸರ್ಕಾರ ತೀರ್ಮಾನ ಕೈಗೊಂಡಿದೆ. ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆ(EPFO) ಕೇಂದ್ರ ಮಂಡಳಿ ಈ ಕುರಿತಂತೆ ಮಾಹಿತಿ ನೀಡಿದ್ದು, 2019 – 20ನೇ ಸಾಲಿಗೆ ಪಿಎಫ್ ಖಾತೆದಾರರಿಗೆ ಶೇಕಡ 8.5 ಬಡ್ಡಿ ದರದಲ್ಲಿ ಹಣ ಜಮಾ ಮಾಡಲಾಗುವುದು ಎಂದು ಹೇಳಲಾಗಿದೆ.
ಎರಡು ಕಂತುಗಳಲ್ಲಿ ಬಡ್ಡಿ ಹಣವನ್ನು ಜಮೆ ಮಾಡಲಾಗುತ್ತದೆ. ಮೊದಲ ಹಂತದಲ್ಲಿ ಶೇಕಡ 8.15 ರಷ್ಟು ಹಾಗೂ ಎರಡನೇ ಹಂತದಲ್ಲಿ ಶೇಕಡ 0.35 ರಷ್ಟು ಬಡ್ಡಿ ಹಣವನ್ನು ಪಾವತಿ ಮಾಡಲು ತೀರ್ಮಾನಿಸಲಾಗಿದೆ.
ಪ್ರಸಕ್ತ ಆರ್ಥಿಕ ವರ್ಷಕ್ಕೆ ಪಿಎಫ್ ಬಡ್ಡಿ ದರವನ್ನು ಶೇಕಡ 8.5 ಕ್ಕಿಂತ ಕೆಳಗಿಳಿಸಲ್ಲ. ಕೆಲವು ಹೂಡಿಕೆಗಳನ್ನು ಈಗಿನ ಪರಿಸ್ಥಿತಿಯಲ್ಲಿ ನಗದೀಕರಣ ಮಾಡಲು ಸಾಧ್ಯವಿಲ್ಲದ ಹಿನ್ನೆಲೆಯಲ್ಲಿ ಎರಡು ಕಂತುಗಳಲ್ಲಿ ಬಡ್ಡಿಯನ್ನು ಪಾವತಿಸಲಾಗುವುದು ಎಂದು ಇಪಿಎಫ್ಒ ಕೇಂದ್ರೀಯ ಮಂಡಳಿ ಹೇಳಿದೆ.
ಕೊರೋನಾ ಲಾಕ್ಡೌನ್ ನಂತರದಲ್ಲಿ ಪಿಎಫ್ ಬಡ್ಡಿ ಕಡಿತ ಮಾಡಲಾಗುವುದು ಎಂದು ಹೇಳಲಾಗಿತ್ತು. ಆದರೆ ಕಳೆದ ಮಾರ್ಚ್ ನಲ್ಲಿ ಘೋಷಣೆ ಮಾಡಿರುವಂತೆ ಶೇಕಡ 8.5 ಬಡ್ಡಿ ದರ ನೀಡಲಾಗುವುದು. 2015 -16 ರಲ್ಲಿ ಶೇಕಡ 8.8 ರಷ್ಟು ಬಡ್ಡಿ ದರ ಇತ್ತು. ಮಾರ್ಚ್ ಗಿಂತ ಮೊದಲು ಶೇಕಡ 8.65 ರಷ್ಟು ಬಡ್ಡಿ ದರ ಇದ್ದು, ನಂತರದಲ್ಲಿ ಇಳಿಕೆ ಮಾಡಿದ್ದು ಕೊರೋನಾ ಕಾರಣದಿಂದ ಮತ್ತೆ ಇಳಿಕೆ ಮಾಡಬಹುದೆಂದು ಹೇಳಲಾಗಿತ್ತು. ಆದರೆ, ಇಳಿಕೆ ಮಾಡದೇ ಶೇಕಡ 8.5 ರಷ್ಟು ಬಡ್ಡಿ ದರದಲ್ಲಿ ಪಾವತಿ ಮಾಡಲಾಗುವುದು ಎಂದು ಹೇಳಲಾಗಿದೆ.