ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ತ್ರಿಭಾಷಾ ಸೂತ್ರ ಅಳವಡಿಸಿಕೊಳ್ಳುವುದಿಲ್ಲ ಎಂದು ಕೇಂದ್ರ ಸರ್ಕಾರಕ್ಕೆ ಸ್ಪಷ್ಟಪಡಿಸಿರುವ ತಮಿಳುನಾಡು ಸರ್ಕಾರ, ದ್ವಿಭಾಷಾ ಸೂತ್ರವನ್ನೇ ಮುಂದುವರಿಸುವುದಾಗಿ ಹೇಳಿದೆ.
ತಮಿಳುನಾಡಿನಲ್ಲಿ ಮೊದಲಿನಿಂದಲೂ ದ್ವಿಭಾಷಾ ಸೂತ್ರವನ್ನೇ ಅನುಸರಿಸುತ್ತಿದ್ದು, ಯಶಸ್ವಿ ಕೂಡ ಆಗಿದೆ. ಭವಿಷ್ಯದಲ್ಲೂ ದ್ವಿಭಾಷಾ ಸೂತ್ರವನ್ನೇ ಮುಂದುವರಿಸಲು ಸರ್ಕಾರ ನಿರ್ಧರಿಸಿದೆ.
ಈ ಕುರಿತು ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಅವರಿಗೆ ಪತ್ರ ಬರೆದಿರುವ ತಮಿಳುನಾಡು ಶಿಕ್ಷಣ ಸಚಿವ ಕೆ.ಪಿ. ಅನ್ಬಳಗನ್, ನೂತನ ರಾಷ್ಟ್ರೀಯ ನೀತಿ(ಎನ್ ಇ ಪಿ) ಯನ್ನು ವಿವಾದಾತ್ಮಕ ನೀತಿ ಎಂದು ಉಲ್ಲೇಖಿಸಿದ್ದು, ಗ್ರಾಮೀಣ ಮಕ್ಕಳ ಹಿತದೃಷ್ಟಿಯಿಂದ ಪದವಿಪೂರ್ವ ವಿದ್ಯಾರ್ಥಿಗಳಿಗೆ ರಾಷ್ಟ್ರ ಮಟ್ಟದ ಅರ್ಹತಾ ಪ್ರವೇಶ ಪರೀಕ್ಷೆ ನಡೆಸುವುದಕ್ಕೂ ನಮ್ಮ ವಿರೋಧವಿದೆ ಎಂದಿದ್ದಾರೆ.
ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿನ ಮಿಕ್ಕ ಅಂಶಗಳ ಅಳವಡಿಕೆ ಸಂಬಂಧ ಉನ್ನತ ಶಿಕ್ಷಣ ಇಲಾಖೆ ಕಾರ್ಯದರ್ಶಿ ನೇತೃತ್ವದಲ್ಲಿ ಸಪ್ತ ಸದಸ್ಯರ ಸಮಿತಿ ರಚಿಸಲಾಗಿದೆ. 2035 ರ ವೇಳೆಗೆ ಒಟ್ಟಾರೆ ದಾಖಲಾತಿ ಅನುಪಾತ (ಜಿಇಆರ್) ಶೇ.50 ರಷ್ಟು ಇರಬೇಕೆಂದು ಎನ್ ಇ ಪಿ ನಿರ್ದೇಶಿಸಿದ್ದು, 2019-20 ಶೈಕ್ಷಣಿಕ ವರ್ಷದಲ್ಲೇ ಈ ಗುರಿ ಮುಟ್ಟಿರುವ ತಮಿಳುನಾಡು, 2035 ರ ವೇಳೆಗೆ ಈ ಪ್ರಮಾಣವನ್ನು ಶೇ.65 ಕ್ಕೆ ಕೊಂಡೊಯ್ಯುವ ಉದ್ದೇಶ ಹೊಂದಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.