ಮುಂಬೈ: ಮೂರು ದಿನಗಳ ವಿಚಾರಣೆಯ ನಂತರ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿಗೆ ಸಂಬಂಧಿಸಿದ ಡ್ರಗ್ಸ್ ಪ್ರಕರಣದಲ್ಲಿ ರಿಯಾ ಚಕ್ರವರ್ತಿಯನ್ನು ರಾಷ್ಟ್ರೀಯ ಮಾದಕ ವಸ್ತು ನಿಯಂತ್ರಣ ಘಟಕ(ಎನ್.ಸಿ.ಬಿ.) ಬಂಧಿಸಿದೆ.
ಸ್ಥಳೀಯ ನ್ಯಾಯಾಲಯ ಸೆಪ್ಟೆಂಬರ್ 22 ರ ವರೆಗೆ ನ್ಯಾಯಾಂಗ ಕಸ್ಟಡಿಗೆ ಕಳುಹಿಸಿದೆ. ರಿಯಾ ಚಕ್ರವರ್ತಿ ಜಾಮೀನು ಅರ್ಜಿಯನ್ನು ಕೋರ್ಟ್ ತಿರಸ್ಕರಿಸಿದೆ. ಡ್ರಗ್ಸ್ ಸಿಂಡಿಕೇಟ್ ನ ಸಕ್ರಿಯ ಸದಸ್ಯರಾಗಿರುವ ರಿಯಾ ಚಕ್ರವರ್ತಿ ಮತ್ತು ಆಕೆಯ ಗೆಳೆಯ ರಜಪೂತ್ ಅವರ ಬಗ್ಗೆ ಸಂಗ್ರಹಿಸಿರುವ ಮಾಹಿತಿ ವಿವರವನ್ನು ಎನ್.ಸಿ.ಬಿ. ನ್ಯಾಯಾಲಯಕ್ಕೆ ತಿಳಿಸಿದೆ.
ಈಗಾಗಲೇ ಮೂರು ದಿನಗಳ ಕಾಲ ರಿಯಾ ಚಕ್ರವರ್ತಿಯನ್ನು ವಿಚಾರಣೆಗೆ ಒಳಪಡಿಸಿರುವ ಎನ್.ಸಿ.ಬಿ. ಮಾಹಿತಿ ನೀಡಿದ್ದು, ರಿಯಾಗೆ ಜಾಮೀನು ಪಡೆಯಲು ಸೆಷನ್ಸ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವುದಾಗಿ ಅವರ ವಕೀಲ ಸತೀಶ್ ಮನೇಶಿಂದೆ ತಿಳಿಸಿದ್ದಾರೆ.
ವಿಡಿಯೋ ಕಾನ್ಫರೆನ್ಸ್ ಮೂಲಕ ಮ್ಯಾಜಿಸ್ಟ್ರೇಟ್ ಮುಂದೆ ರಿಯಾ ಅವರನ್ನು ಹಾಜರುಪಡಿಸಿದ್ದು, ಇದೇ ಸಂದರ್ಭದಲ್ಲಿ ಆರೋಪಿಗಳ ವಿಚಾರಣೆ ವೇಳೆ ಪಡೆದ ಸಂಗತಿಗಳ ವಿವರ ನೀಡಲಾಗಿದೆ. ಅವರ ಹೇಳಿಕೆಗಳ ಪರಿಶೀಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಡ್ರಗ್ಸ್ ಖರೀದಿ ಮತ್ತು ಹಣಕಾಸು ವಹಿವಾಟುಗಳಲ್ಲಿ ರಿಯಾ ಸೇರಿ ಆರೋಪಿತರೆಲ್ಲರೂ ಭಾಗಿಯಾಗಿರುವುದು ಗೊತ್ತಾಗಿದೆ. ರಿಯಾ ಚಕ್ರವರ್ತಿಯನ್ನು ಕೋವಿಡ್ ಪರೀಕ್ಷೆಗೆ ಮುಂಬೈ ಸೆಂಟ್ರಲ್ ನಲ್ಲಿರುವ ಸಿಯಾನ್ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ನೆಗೆಟಿವ್ ರಿಪೋರ್ಟ್ ಬಂದಿದೆ. ರಿಯಾ ಚಕ್ರವರ್ತಿಯನ್ನು ಬಂಧಿಸಲು ಸಾಕಷ್ಟು ಪುರಾವೆಗಳಿವೆ ಎಂದು ಎನ್.ಸಿ.ಬಿ. ಉಪ ಮಹಾನಿರ್ದೇಶಕ ಮುತಾ ಅಶೋಕ್ ಜೈನ್ ಹೇಳಿದ್ದಾರೆ.