ನವದೆಹಲಿ: ಮೇಲ್ಮನೆ ಉಪಸಭಾಪತಿ ಅಭ್ಯರ್ಥಿ ಕಣಕ್ಕಿಳಿಸಲು ಕಾಂಗ್ರೆಸ್ ನಿರ್ಧರಿಸಿದೆ. ರಾಜ್ಯಸಭೆಯ ಉಪಸಭಾಪತಿ ಸ್ಥಾನಕ್ಕೆ ಪ್ರತಿಪಕ್ಷಗಳ ಸಹಕಾರದೊಂದಿಗೆ ಜಂಟಿ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಕಾಂಗ್ರೆಸ್ ನಾಯಕರು ತೀರ್ಮಾನ ಕೈಗೊಂಡಿದ್ದಾರೆ.
ಸೆಪ್ಟೆಂಬರ್ 14 ರಿಂದ ಸಂಸತ್ ಮುಂಗಾರು ಅಧಿವೇಶನ ಆರಂಭವಾಗಲಿದೆ. ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅಧ್ಯಕ್ಷತೆಯಲ್ಲಿ ನಡೆದ ಪಕ್ಷದ ರಣನೀತಿ ನಿರೂಪಕರ ಸಭೆಯಲ್ಲಿ ಉಪಸಭಾಪತಿ ಸ್ಥಾನಕ್ಕೆ ಅಭ್ಯರ್ಥಿ ಕಣಕ್ಕಿಳಿಸುವ ಚರ್ಚೆ ನಡೆದಿದೆ. ಉಪಸಭಾಪತಿಯಾಗಿದ್ದ ಜೆಡಿಯುನ ಹರಿವಂತ್ ಅವರ ಅವಧಿ ಪೂರ್ಣಗೊಂಡಿದ್ದು ಚುನಾವಣೆ ನಡೆಯಲಿದೆ. 245 ಸದಸ್ಯಬಲದ ರಾಜ್ಯಸಭೆಯಲ್ಲಿ ಬಿಜೆಪಿ ನೇತೃತ್ವದ ಎನ್.ಡಿ.ಎ. 117, ಕಾಂಗ್ರೆಸ್ ನೇತೃತ್ವದ ಯುಪಿಎ 60 ಸದಸ್ಯ ಬಲ ಹೊಂದಿವೆ. ಉಳಿದಂತೆ ತಟಸ್ಥ ಪಕ್ಷಗಳ 67 ಸದಸ್ಯರಿದ್ದಾರೆ.