ಕೊರೊನಾಕ್ಕೆ ಹೆದರಿ ಸಾಯುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿರುವ ನಡುವೆ, ಆಂಧ್ರ ಪ್ರದೇಶದ 102 ವರ್ಷದ ವೃದ್ಧೆಯೊಬ್ಬರು ಹೋಂ ಐಸೋಲೇಷನ್ ನಲ್ಲಿದ್ದುಕೊಂಡೇ ಕೊರೊನಾ ವಿರುದ್ಧ ಗೆದ್ದಿದ್ದಾರೆ.
ಅನಂತಪುರ ಜಿಲ್ಲೆಯ ಪುಟ್ಟಪುರ್ತಿ ಮಂಡಲದ ಪೆದ್ದ ಕಮ್ಮವಾರಿಪಲ್ಲೆಯ ಮೆಮ್ಮನೇನಿ ಸುಬ್ಬಮ್ಮ ಎನ್ನುವ ವೃದ್ಧೆ ಮನೆಯಲ್ಲಿದ್ದುಕೊಂಡೇ ಕೊರೊನಾ ಗೆಲ್ಲುವ ಮೂಲಕ, ಅನೇಕರಿಗೆ ಮಾದರಿಯಾಗಿದ್ದಾರೆ. ಆ.21ಕ್ಕೆ ಸುಬ್ಬಮ್ಮ ಅವರಿಗೆ ಕೊರೊನಾ ಕಾಣಿಸಿಕೊಂಡಿತ್ತು. ಇದೀಗ ಆರೋಗ್ಯವಾಗಿದ್ದಾರೆ.
ಸುಬ್ಬಮ್ಮ ಅವರಿಗೆ ಐವರು ಗಂಡು, ಮೂವರು ಹೆಣ್ಣು ಮಕ್ಕಳಿದ್ದಾರೆ. ಈ ಪೈಕಿ ಹಿರಿಯ ಪುತ್ರ 52 ವರ್ಷದ ಮಗ ಆಸ್ಪತ್ರೆಗೆ ದಾಖಲಾಗಿದ್ದರು. ಅವರ ಸೊಸೆ ಹಾಗೂ ಮೊಮ್ಮಗ ಮನೆಯಲ್ಲಿಯೇ ಕೊರೊನಾ ವಿರುದ್ಧದ ಹೋರಾಟದಲ್ಲಿ ಗೆದ್ದಿದ್ದರು. ವೃದ್ಧೆ ಕೊರೊನಾದಿಂದ ಗುಣಮುಖರಾಗಲು ಪ್ರಮುಖವಾಗಿ, ನಿಯಮಿತವಾಗಿ ಔಷಧ, ರಾಗಿ ಮುದ್ದೆ, ನಿಂಬೆ ಜ್ಯೂಸ್ ಹಾಗೂ ನಾನ್ ವೆಜ್ ತಿನ್ನುತ್ತಿದ್ದರು ಎಂದು ಹೇಳಲಾಗಿದೆ.