ಬೆಂಗಳೂರು: ನಾಳೆಯಿಂದ ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ರೈಲು ಸಂಚಾರ ಆರಂಭವಾಗಲಿದೆ. ಬರೋಬ್ಬರಿ 5 ತಿಂಗಳ ನಂತರ ಸಂಚಾರಕ್ಕೆ ಬಿ.ಎಂ.ಆರ್.ಸಿ.ಎಲ್. ಸಿದ್ಧತೆ ಕೈಗೊಂಡಿದೆ.
ಕೊರೊನಾ ಸೋಂಕು ಹರಡದಂತೆ ತಡೆಯಲು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಬಿಎಂಆರ್ಸಿಎಲ್ ವತಿಯಿಂದ ಮುಂಜಾಗ್ರತೆ ಕ್ರಮ ಕೈಗೊಂಡು ಮೆಟ್ರೋ ಸಂಚಾರ ಆರಂಭಿಸಲಾಗುತ್ತಿದೆ. ಜನದಟ್ಟಣೆಯ ಅವಧಿಯಲ್ಲಿ ಪ್ರತಿ 5 ನಿಮಿಷಕ್ಕೊಮ್ಮೆ ಬೇರೆ ಸಮಯದಲ್ಲಿ ಪ್ರತಿ 10 ನಿಮಿಷಕ್ಕೊಮ್ಮೆ ರೈಲು ಸಂಚಾರ ಆರಂಭವಾಗಲಿದೆ.
ಕಂಟೇನ್ಮೆಂಟ್ ವಲಯದ ಸ್ಟೇಷನ್ ಗಳಲ್ಲಿ ರೈಲುನಿಲುಗಡೆ ಇರುವುದಿಲ್ಲ. ಮೆಟ್ರೋದಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಹಲವು ಷರತ್ತು ವಿಧಿಸಲಾಗಿದೆ. ಸ್ಮಾರ್ಟ್ ಕಾರ್ಡ್ ಹೊಂದಿರುವ ಪ್ರಯಾಣಿಕರಿಗೆ ಅವಕಾಶ ನೀಡಲಿದ್ದು, ಮಾಸ್ಕ್ ಬಳಕೆ, ಸ್ಯಾನಿಟೈಸರ್, ದೈಹಿಕ ಅಂತರ ಕಾಪಾಡಿಕೊಳ್ಳಬೇಕಿದೆ. ಪ್ರವೇಶ, ನಿರ್ಗಮನ ದ್ವಾರ ಪ್ಲಾಟ್ ಫಾರ್ಮ್ ಸ್ಥಳದಲ್ಲಿ ಗುರುತಿಸಿದ ಜಾಗದಲ್ಲಿ ಪ್ರಯಾಣಿಕರು ನಿಲ್ಲಬೇಕು. ಒಂದು ನಿಲ್ದಾಣದಲ್ಲಿ 50 ಕ್ಕಿಂತ ಹೆಚ್ಚು ಪ್ರಯಾಣಿಕರು ನಿಲ್ಲುವಂತಿಲ್ಲ.
ಆರು ಬೋಗಿಯ ರೈಲಿನಲ್ಲಿ 400 ಪ್ರಯಾಣಿಕರಿಗೆ ಮಾತ್ರ ಅವಕಾಶ ಇರುತ್ತದೆ. ರೈಲಿನ ಒಳಗೆ ಗುರುತಿಸಿದ ಆಸನದಲ್ಲಿ ಕುಳಿತುಕೊಳ್ಳಬೇಕು. ಎಲ್ಲಾ ಪ್ರಯಾಣಿಕರ ದೇಹದ ಉಷ್ಣಾಂಶ ಪರೀಕ್ಷಿಸಲಾಗುವುದು. ಎಸ್ಕಲೇಟರ್ ಗಳಲ್ಲಿ ಒಂದು ಮೆಟ್ಟಿಲು ಅಂತರ ಕಾಪಾಡಬೇಕು. 60 ವರ್ಷ ಮೇಲ್ಪಟ್ಟವರು ಮತ್ತು 10 ವರ್ಷದೊಳಗಿನ ಮಕ್ಕಳು ತೀರಾ ಅಗತ್ಯವಿದ್ದರೆ ಮಾತ್ರ ಮೆಟ್ರೋದಲ್ಲಿ ಪ್ರಯಾಣಿಸಬೇಕು ಎಂದು ಹೇಳಲಾಗಿದೆ.