ಕೊರೊನಾ ಸಂಕ್ರಾಮಿಕ ಹರಡುತ್ತಿರುವ ಹಿನ್ನೆಲೆಯಲ್ಲಿ ದೇಶಾದ್ಯಂತ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಆದರೆ ಎಲ್ಲ ಸಂದರ್ಭದಲ್ಲೂ ಮಾಸ್ಕ ಧರಿಸಿರಬೇಕೇ? ಒಬ್ಬರೇ ಕಾರಿನಲ್ಲಿ ಹೋಗುವಾಗಲೂ ಮಾಸ್ಕ್ ಧರಿಸಿರಬೇಕೆ? ಸೈಕ್ಲಿಂಗ್, ಜಾಗಿಂಗ್ ಮಾಡುವಾಗಲೂ ನಿಯಮ ಪಾಲಿಸಬೇಕೆ? ಎಂಬ ಗೊಂದಲ ಎದ್ದಿದೆ.
ಅನೇಕ ಕಡೆ ಕಾರಿನಲ್ಲಿ ಒಬ್ಬರೇ ಪ್ರಯಾಣಿಸುವಾಗ ಮಾಸ್ಕ್ ಧರಿಸಿಲ್ಲವೆಂದು ದಂಡ ಹಾಕಿದ ಉದಾಹರಣೆಗಳು ಇವೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸ್ಪಷ್ಟನೆ ನೀಡಿದೆ.
ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ರಾಜೇಶ್ ಭೂಷಣ್ ಈ ಕುರಿತು ಮಾಹಿತಿ ನೀಡಿ, ಕಾರಿನಲ್ಲಿ ಒಬ್ಬರೇ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಮಾಸ್ಕ್ ಧರಿಸಬೇಕೆಂಬ ಯಾವುದೇ ಸಲಹೆ ಬಂದಿಲ್ಲ, ಆದ್ದರಿಂದ ಒಬ್ಬರೇ ಪ್ರಯಾಣಿಸುತ್ತಿರುವ ಸಂದರ್ಭದಲ್ಲಿ ಮಾಸ್ಕ್ ಧರಿಸದಿರುವುದು ನಿಯಮಗಳ ಉಲ್ಲಂಘನೆ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಗುಂಪಿನಲ್ಲಿ ವ್ಯಾಯಾಮ ಮಾಡುವವರು ಮಾಸ್ಕ್ ಧರಿಸಬೇಕಾಗುತ್ತದೆ ಮತ್ತು ಸಾಮಾಜಿಕ ಅಂತರದ ನಿಯಮ ಪಾಲಿಸಬೇಕು. ಆದರೆ ವಾಹನದ ಒಳಗೆ ಒಬ್ಬರೇ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಹಾಗೂ ಏಕಾಂಗಿಯಾಗಿ ಸೈಕಲ್ ತುಳಿಯುತ್ತಿದ್ದರೆ ಮಾಸ್ಕ್ ಧರಿಸುವ ಅಗತ್ಯವಿಲ್ಲ ಎಂದು ಗೊಂದಲಕ್ಕೆ ತೆರೆ ಎಳೆದಿದ್ದಾರೆ.