ನವದೆಹಲಿ: ಕೊರೋನಾ ಲಾಕ್ಡೌನ್ ಕಾರಣದಿಂದ ಸಂಕಷ್ಟದಲ್ಲಿರುವ, ಸಾಲದ ಇಎಂಐ ಪಾವತಿಸಲು ಒದ್ದಾಡುತ್ತಿರುವ ಸಾಲಗಾರರಿಗೆ ಸುಪ್ರೀಂಕೋರ್ಟ್ ಕೊಂಚ ರಿಲೀಫ್ ನೀಡಿದೆ.
ಸಂಕಷ್ಟದಲ್ಲಿರುವ ಸಾಲಗಾರರ ಹಿತಾಸಕ್ತಿಗೆ ಪೂರಕವಾಗಿ ಆದೇಶ ನೀಡಿರುವ ಸುಪ್ರೀಂಕೋರ್ಟ್ ಮುಂದಿನ ಆದೇಶದವರೆಗೆ ಸುಸ್ತಿದಾರರು ಎಂದು ಘೋಷಿಸದಂತೆ ಕೇಂದ್ರ ಸರ್ಕಾರ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ ಗೆ ಸೂಚನೆ ನೀಡಲಾಗಿದೆ.
ಸಾಲದ ಮುಂದೂಡಿಕೆ ಅವಧಿ ವಿಸ್ತರಣೆ ಮತ್ತು ಮೊರಾಟೋರಿಯಂ ಅವಧಿಯಲ್ಲಿ ಹಾಕಲಾಗಿರುವ ಬಡ್ಡಿ ವಿನಾಯಿತಿ ಕೋರಿ ಸಲ್ಲಿಕೆಯಾಗಿದ್ದ ಅರ್ಜಿಗಳ ವಿಚಾರಣೆ ಸುಪ್ರೀಂ ಕೋರ್ಟ್ ನಲ್ಲಿ ನಡೆದಿದೆ. ನ್ಯಾಯಮೂರ್ತಿಗಳಾದ ಅಶೋಕ ಭೂಷಣ್ ಮತ್ತು ಆರ್. ಸುಭಾಷ್ ರೆಡ್ಡಿ ಹಾಗೂ ಎಂ.ಆರ್ ಶಾ ಅವರ ತ್ರಿಸದಸ್ಯ ಪೀಠದಲ್ಲಿ ವಿಚಾರಣೆ ನಡೆದಿದ್ದು ಆಗಸ್ಟ್ 31 ಕ್ಕೆ ಇಎಂಐ ಪಾವತಿ ಮುಂದೂಡಿಕೆ ಸೌಲಭ್ಯ ಅಂತ್ಯವಾಗಿದ್ದರೂ ಮುಂದಿನ ಆದೇಶದವರೆಗೆ ಯಾವುದೇ ಸಾಲದ ಖಾತೆಗಳನ್ನು ವಸೂಲಾಗದಿರುವ ಸಾಲ ಎಂದು ಘೋಷಿಸುವಂತಿಲ್ಲ ಎಂದು ತಿಳಿಸಲಾಗಿದೆ.
ಇದರಿಂದಾಗಿ ವಾಹನ, ಗೃಹ ಮೊದಲಾದ ಸಾಲಗಳನ್ನು ಪಡೆದು ಇಎಂಐ ಪಾವತಿಸಲಾಗದೆ ಆತಂಕಕ್ಕೆ ಒಳಗಾಗಿದ್ದ ಸಾಲಗಾರರಿಗೆ ಕೊಂಚ ರಿಲೀಫ್ ಸಿಕ್ಕಿದೆ. ಇಎಂಐ ಮುಂದೂಡಿಕೆ ಅವಧಿಯಲ್ಲಿ ಬ್ಯಾಂಕುಗಳು ಬಡ್ಡಿ ವಿಧಿಸುವುದನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆ ಸೆಪ್ಟಂಬರ್ 10ಕ್ಕೆ ನಡೆಯಲಿದೆ.