ಬೆಂಗಳೂರು: ಸ್ಯಾಂಡಲ್ ವುಡ್ ಗೆ ಡ್ರಗ್ಸ್ ಮಾಫಿಯಾ ನಂಟು ಆರೋಪಕ್ಕೆ ಸಂಬಂಧಿಸಿದಂತೆ ಯಾವುದೇ ಸಾಕ್ಷಿಗಳಿಲ್ಲದೇ ನನ್ನ ವಿರುದ್ಧ ಅನಗತ್ಯ ಆರೋಪಗಳನ್ನು ಮಾಡುವುದು ತಪ್ಪು. ಸುಮ್ಮನೇ ಈ ವಿಚಾರದಲ್ಲಿ ನನ್ನ ಹೆಸರನ್ನು ಎಳೆದು ತರಬೇಡಿ ಎಂದು ನಟಿ ಸಜನಾ ಗಲ್ರಾನಿ ತಿಳಿಸಿದ್ದಾರೆ.
ಡ್ರಗ್ಸ್ ಮಾಫಿಯಾ ನಂಟಿಗೆ ಸಂಬಂಧಿಸಿದಂತೆ ಈಗಾಗಲೇ ನಟಿ ರಾಗಿಣಿ ದ್ವಿವೇದಿ ಆಪ್ತ ರವಿಶಂಕರ್ ಹಾಗೂ ನಟಿ ಸಂಜನಾ ಆಪ್ತ ರಾಹುಲ್ ನನ್ನು ಸಿಸಿಬಿ ಪೊಲೀಸರು ವಿಚಾರಣೆ ಒಳಪಡಿಸಿದ್ದಾರೆ. ಅವರಿಂದ ಕಾರು ಹಾಗೂ ಮೊಬೈಲ್ ಗಳನ್ನು ವಶಕ್ಕೆ ಪಡೆದಿರುವ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ.
ಈ ಹಿನ್ನಲೆಯಲ್ಲಿ ಪ್ರತಿಕ್ರಿಯಿಸಿರುವ ಸಂಜನಾ, ನನಗೆ ಪರಿಚಯವಿರುವ ವ್ಯಕ್ತಿಯನ್ನು ವಿಚಾರಣೆಗೆ ಕರೆದೊಯ್ದರೆ ನನಗೂ ಅದಕ್ಕೂ ಏನು ಸಂಬಂಧ. ನಾನು ಬೆಂಗಳೂರು ಬಿಟ್ಟು ಎಲ್ಲಿಯೂ ಹೋಗಿಲ್ಲ. ನನ್ನ ಮನೆಯಲ್ಲಿ ಆರಾಮವಾಗಿದ್ದೇನೆ. ಅನಗತ್ಯವಾಗಿ ಈ ವಿಚಾರದಲ್ಲಿ ನನ್ನ ಹೆಸರು ತಂದು ತೊಂದರೆ ಕೊಡಬೇಡಿ. ನಾಳೆ ನಾನೂ ಮದುವೆಯಾಗುವ ಹುಡುಗಿ. ಈ ರೀತಿ ಹೆಸರು ಹಾಳು ಮಾಡಿದರೆ ನನ್ನ ಬಗ್ಗೆ ಏನು ಅಂದುಕೊಳ್ಳುತ್ತಾರೆ ಎಂದು ಕಿಡಿಕಾರಿದ್ದಾರೆ.