ಲಿಸ್ಬನ್: ಕ್ರಿಯಾಶೀಲ ವ್ಯಕ್ತಿಗಳಿಗೆ ಸಾಮಾಜಿಕ ಜಾಲತಾಣ ಉತ್ತಮ ವೇದಿಕೆ ಒದಗಿಸುತ್ತದೆ. ಅವರಿಗೆ ದೇಶಗಳ ಗಡಿ ರೇಖೆ ಮೀರಿ ವಿಶ್ವದೆಲ್ಲೆಡೆ ಅಭಿಮಾನಿಗಳು ಸೃಷ್ಟಿಯಾಗುತ್ತಾರೆ. ಅದೇ ರೀತಿ ಪೋರ್ಚುಗೀಸ್ ಚಿತ್ರ ಕಲಾವಿದರೊಬ್ಬರ ಚಿತ್ರಗಳು ಇಸ್ಟಾಗ್ರಾಂನಲ್ಲಿ ಧೂಳೆಬ್ಬಿಸುತ್ತಿವೆ. ಲಕ್ಷಾಂತರ ಜನ ಅವುಗಳನ್ನು ನೋಡಿ ಶೇರ್ ಮಾಡುತ್ತಿದ್ದಾರೆ.
ಸೆರ್ಗಿಯೊ ಒಡೆತ್ ಪ್ರಸಿದ್ಧ ಚಿತ್ರ ಕಲಾವಿದ. 1976 ರಲ್ಲಿ ಪೋರ್ಚುಗಲ್‌ನ ಡಮೈನಲ್ಲಿ ಜನಿಸಿರುವ ಅವರು ತಮ್ಮ ಕ್ರಿಯಾಶೀಲತೆಯ ಮೂಲಕ ಪ್ರಸಿದ್ಧರಾಗಿದ್ದಾರೆ. ಅವರು ಬಿಡಿಸಿ ಹಾಕುವ ಭಿತ್ತಿ ಚಿತ್ರಗಳಿಗೆ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಅವರ ಇನ್ಸ್ಟಾಗ್ರಾಂ ಖಾತೆಗೆ 765 ಸಾವಿರ ಫಾಲೋವರ್‌ಗಳಿದ್ದಾರೆ.
ಒಡೆತ್ ಕ್ಯಾನ್ವಾಸ್‌ನಲ್ಲಿ ಬಿಡಿಸಿರುವ ಕಾಂಪೌಂಡ್ ಪಕ್ಕ ನಿಂತ ಕಾರು, ಸುಟ್ಟು ಹೋದ ಬಸ್, ವಸ್ತುಗಳು ಚೆಲ್ಲಾಪಿಲ್ಲಿಯಾಗಿರುವ, ಕಟ್ಟಡ ಹೀಗೆ ನೂರಾರು 3ಡಿ ಚಿತ್ರಗಳನ್ನು ನೋಡಿದರೆ ಯಾರೂ ಅದು ಒಂದು ಭಿತ್ತಿ ಚಿತ್ರ ಎಂದು ಹೇಳುವಂತೆಯೇ ಇಲ್ಲ. ಅದು ಪಕ್ಕಾ ಫೋಟೋದಂತೆಯೇ ಕಾಣುತ್ತದೆ. ಸಾಧಾರಣ ಚಿತ್ರಕ್ಕೆ ವಾಸ್ತವಿಕತೆಯ ಸ್ವರೂಪ ನೀಡಲು ಅವರಿಂದ ಮಾತ್ರ ಸಾಧ್ಯ.