ಕನ್ನಡ ಚಿತ್ರರಂಗ ಶೇ.95ರಷ್ಟು ಸ್ವಚ್ಛವಾಗಿದೆ. ಶೇ.5 ರಷ್ಟು ಜನ ಮಾತ್ರ ಈ ಡ್ರಗ್ಸ್ ಜಾಲದಲ್ಲಿ ಸಿಲುಕಿದ್ದಾರೆ. ನನ್ನ ಬಳಿಯಿರುವ ಎಲ್ಲಾ ಮಾಹಿತಿಗಳನ್ನು ನಾನು ಸಿಸಿಬಿ ಪೊಲೀಸರಿಗೆ ನೀಡಿದ್ದೇನೆ ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ತಿಳಿಸಿದ್ದಾರೆ.
ಸಿಸಿಬಿ ವಿಚಾರಣೆಗೆ ಇಂದ್ರಜಿತ್ ಲಂಕೇಶ್ ಇಂದು ಕೂಡ ಹಾಜರಾಗಲಿದ್ದು, ಇದಕ್ಕೂ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕನ್ನಡ ಚಿತ್ರರಂಗವೇ ಸಿಸಿಬಿ ತನಿಖೆಗೆ ಸಹಕರಿಸಬೇಕು. ಈ ಡ್ರಗ್ಸ್ ಜಾಲಕ್ಕೆ ಕಡಿವಾಣ ಹಾಕಬೇಕಿದೆ. ನನ್ನ ಹೇಳಿಕೆಗೆ ನಾನು ಈಗಲೂ ಬದ್ಧನಾಗಿದ್ದೇನೆ. ನನ್ನ ಬಳಿ ಇದ್ದ ಮಾಹಿತಿಗಳನ್ನು ನಾನು ಸಿಸಿಬಿ ನೀಡಿದ್ದೇನೆ. ಏನು ಮಾಹಿತಿ ನೀಡಿದ್ದೀನಿ ಎಂದು ಪ್ರಶ್ನಿಸಬೇಡಿ. ನನ್ನ ಬ್ಯಾಗ್ ನಲ್ಲಿ ಒಂದು ಹಾರ್ಡ್ ಡಿಸ್ಕ್, ಐಪಾಡ್ ಇದೆ. ಅದನ್ನು ನಾನು ಬಹಿರಂಗಪಡಿಸಿದರೆ ತನಿಖೆಗೆ ತೊಂದರೆಯಾಗಲಿದೆ ಎಂದರು.
ಹಿಂದಿನಿಂದಲೂ ಕನ್ನಡ ಚಿತ್ರರಂಗ ಕ್ಲೀನ್ ಆಗಿಯೇ ಇದೆ. ಇತ್ತೀಚಿನ ಮೂರನೆ ತಲೆಮಾರಿನವರಿಂದಾಗಿ ಕೆಟ್ಟ ಹೆಸರು ಬರುತ್ತಿದೆ. ಡ್ರಗ್ಸ್ ಜಾಲದಲ್ಲಿ ಅವರು ಸಿಲುಕಿಕೊಳ್ಳುತ್ತಿದ್ದಾರೆ. ಇಂದಿನ ಯುವ ಜನತೆ, ಕಾಲೇಜು ವಿದ್ಯಾರ್ಥಿಗಳು ಸೇರಿ ಸಮಾಜದಲ್ಲಿ ಎಲ್ಲರಿಗೂ ಡ್ರಗ್ಸ್ ಬಗ್ಗೆ ಭಯವಿರಬೇಕು. ಅದು ಕಾನೂನು ಬಾಹೀರವಾದದ್ದು ಎಂಬ ಅರಿವು ಮೂಡಬೇಕು. ಇದೇ ಕಾರಣಕ್ಕೆ ನಾನು ಡ್ರಗ್ಸ್ ಜಾಲದ ಬಗ್ಗೆ ನನಗಿರುವ ಮಾಹಿತಿಯನ್ನು ಸಿಸಿಬಿಗೆ ನೀಡಿದ್ದು, ಅವರು ತನಿಖೆ ಮುಂದುವರೆಸಲಿದ್ದಾರೆ ಎಂದರು.
ಚಿತ್ರರಂಗಕ್ಕೆ ಕೆಲವರಿಂದ ಕೆಟ್ಟ ಹೆಸರು ಬರುತ್ತಿದೆ. ನಾವೆಲ್ಲರೂ ಸೇರಿ ಇಡೀ ಚಿತ್ರರಂಗವನ್ನು ಸರಿಪಡಿಸಬೇಕಿದೆ. ಈಗಗಾಲೇ ಡ್ರಗ್ಸ್ ಕಿಂಗ್ ಪಿನ್ ಅನಿಕಾ ನಾಲ್ಕು ಪುಟಗಳ ಹೇಳಿಕೆ ನೀಡಿದ್ದಾಳೆ. ಆಕೆ ಈಗಾಗಲೆ ಹಲವರ ಹೆಸರು ಹೇಳಿದ್ದಾಳೆ. ನಾನು ಕೂಡ ಹಲವರ ಹೆಸರನ್ನು ತಿಳಿಸಿದ್ದೇನೆ ಎಲ್ಲವೂ ತನಿಖೆಯಾಗಲಿದೆ ಎಂದು ಹೇಳಿದರು.