ಕೊರೊ ನಾದೊಂದಿಗೆ ಬದುಕಲು ಕಲಿಯಿರಿ ಎಂಬ ಧ್ಯೇಯವಾಕ್ಯ ಪ್ರಚಲಿತಕ್ಕೆ ಬರುತ್ತಲೇ ಪ್ರವಾಸೋದ್ಯಮ ಮತ್ತೆ ಚಿಗುರೊಡೆಯುತ್ತಿದೆ. ಮಳೆಗಾಲದ ಅನುಭವಕ್ಕೆಂದೇ ಕಾದಿರುವ ಕೆಲವು ತಾಣಗಳಿಗೆ ತೆರಳಿ ಜನ ಖುಷಿ ಕಂಡುಕೊಳ್ಳುತ್ತಿದ್ದಾರೆ. ಅದಕ್ಕೂ ಮುನ್ನ ಮಳೆಗಾಲದಲ್ಲಿ ಪ್ರವಾಸ ಹೊರಡುವಾಗ ಕೈಗೊಳ್ಳಬೇಕಾದ ಎಚ್ಚರಿಕೆಗಳ ಬಗ್ಗೆ ಗಮನಿಸೋಣ.
ನಿಮ್ಮ ಪ್ರವಾಸಿ ತಾಣ ಚಾರಣವಾಗಿದ್ದರೆ ನೀವು ಹೆಚ್ಚು ಗಮನ ಹರಿಸಲೇ ಬೇಕು. ಮಳೆಗಾಲದಲ್ಲಿ ಕಲ್ಲು ಬಂಡೆಗಳು ಪಾಚಿ ಹಿಡಿದು ವಿಪರೀತ ಜಾರುತ್ತಿರುತ್ತವೆ. ಹಾಗಾಗಿ ಅದಕ್ಕೆ ಹೊಂದಿಕೆಯಾಗುವ ಶೂಗಳನ್ನು ಧರಿಸುವುದು ಬಹಳ ಮುಖ್ಯ.
ಇನ್ನು ಮಳೆಗಾಲದಲ್ಲಿ ರೈನ್ ಕೋಟ್ ಇಲ್ಲದೆ ಪ್ರವಾಸ ಹೊರಡಲು ಸಾಧ್ಯವೇ ಇಲ್ಲ. ಅದರೊಂದಿಗೆ ಕೊಡೆಯೂ ಬ್ಯಾಗ್ ನಲ್ಲಿರಲಿ. ಹೆಚ್ಚು ಭಾರವಿಲ್ಲದ ವಸ್ತುಗಳನ್ನೇ ಬ್ಯಾಗ್ ನಲ್ಲಿ ತುಂಬಿಕೊಳ್ಳಲು ಮರೆಯದಿರಿ. ಬ್ಯಾಗ್ ಭಾರ ಹೆಚ್ಚಿದಷ್ಟೂ ಹೊರೆ ಎನಿಸುತ್ತದೆ.
ವಾಟರ್ ಪ್ರೂಫ್ ಟ್ರಾವೆಲ್ ಬ್ಯಾಗ್ ಗಳು ಮಳೆಗಾಲಕ್ಕೆ ಕಡ್ಡಾಯ. ಇದು ನಿಮ್ಮ ವಸ್ತುಗಳನ್ನು ಮಳೆಯ ನೀರಿನಿಂದ ರಕ್ಷಿಸುತ್ತವೆ. ಫೋಟೊ ತೆಗೆಯಲು ಬಳಸುವ ಕ್ಯಾಮೆರಾಗೂ ವಾಟರ್ ಪ್ರೂಫ್ ಕವರ್ ಹಾಕಿಕೊಳ್ಳಿ. ಇಲ್ಲವಾದರೆ ಕ್ಯಾಮೆರಾ ಲೆನ್ಸ್ ಫಂಗಸ್ ಹಿಡಿದು ಹಾಳಾದೀತು.
ಮೊಬೈಲ್ ಚಾರ್ಜರ್ ಜೊತೆ ಪವರ್ ಬ್ಯಾಂಕ್ ಕಡ್ಡಾಯವಾಗಿ ಇಟ್ಟುಕೊಳ್ಳಿ. ಸೊಳ್ಳೆ ನಿವಾರಕ ವಸ್ತುಗಳು ನಿಮ್ಮ ಜೊತೆ ಇರಲಿ.