ನವದೆಹಲಿ: ಕೊರೋನಾ ಸೋಂಕು ತಡೆಯುವ ನಿಟ್ಟಿನಲ್ಲಿ ಜಾರಿ ಮಾಡಲಾಗಿದ್ದ ಲಾಕ್ ಡೌನ್ ಸಡಿಲಿಕೆ ಮಾಡಲಾಗಿದ್ದು, ಅನ್ಲಾಕ್ -4 ಜಾರಿಯಾಗಿದ್ದು ಮತ್ತಷ್ಟು ಚಟುವಟಿಕೆಗಳಿಗೆ ಅವಕಾಶ ನೀಡಲಾಗಿದೆ.
ಪ್ರಯಾಣಿಕರ ಅನುಕೂಲಕ್ಕಾಗಿ ಮತ್ತಷ್ಟು ರೈಲುಗಳ ಸಂಚಾರಕ್ಕೆ ಭಾರತೀಯ ರೈಲ್ವೆ ಇಲಾಖೆ ಯೋಜನೆ ರೂಪಿಸಿದೆ. ದೇಶದಲ್ಲಿ ಹೆಚ್ಚುವರಿಯಾಗಿ 100 ರೈಲುಗಳ ಸಂಚಾರಕ್ಕೆ ರೈಲ್ವೆ ಇಲಾಖೆ ಮುಂದಾಗಿದೆ. ಈ ಬಗ್ಗೆ ಗೃಹ ಸಚಿವಾಲಯದ ಅನುಮತಿ ಕೇಳಲಾಗಿದೆ.
ಈಗಾಗಲೇ ಎಲ್ಲ ರಾಜ್ಯಗಳೊಂದಿಗೆ ಚರ್ಚೆ ನಡೆಸಿ ಮಾಹಿತಿ ಕಲೆ ಹಾಕಿರುವ ರೈಲ್ವೆ ಇಲಾಖೆ ಮಾರ್ಗಸೂಚಿಗಳೊಂದಿಗೆ ಮತ್ತಷ್ಟು ರೈಲುಗಳ ಸಂಚಾರ ಆರಂಭಿಸಲಿದೆ ಎಂದು ಹೇಳಲಾಗಿದೆ. ಇವುಗಳೊಂದಿಗೆ ಸಬರ್ಬನ್, ಲೋಕಲ್ ಟ್ರೈನ್ ಗಳನ್ನು ಕೂಡ ಆರಂಭಿಸಲಾಗುವುದು. ಇನ್ನು ಸೆಪ್ಟಂಬರ್ 7ರಿಂದ ದೇಶಾದ್ಯಂತ ಮೆಟ್ರೋ ರೈಲು ಸಂಚಾರ ಆರಂಭಿಸಲು ಅನುಮತಿ ನೀಡಲಾಗಿದೆ.
ಮಾರ್ಚ್ 25 ರಿಂದ ದೇಶಾದ್ಯಂತ ರೈಲು ಸಂಚಾರ ಬಂದ್ ಆಗಿತ್ತು. ನಂತರದಲ್ಲಿ ವಲಸೆ ಕಾರ್ಮಿಕರು, ಪ್ರವಾಸಿಗರು, ವಿದ್ಯಾರ್ಥಿಗಳಿಗಾಗಿ ವಿಶೇಷ ಶ್ರಮಿಕ್ ರೈಲು ಓಡಿಸಲಾಗಿತ್ತು. ಈಗ 100 ಹೆಚ್ಚುವರಿ ರೈಲುಗಳ ಸಂಚಾರ ಆರಂಭಕ್ಕೆ ಪೂರ್ವ ತಯಾರಿ ಮಾಡಿಕೊಳ್ಳಲಾಗಿದೆ.