ನವದೆಹಲಿ: ಅಡುಗೆ ಅನಿಲ ಸಬ್ಸಿಡಿ ನೀಡುವ ಯೋಜನೆಯನ್ನು ಸರ್ಕಾರ ಸ್ಥಗಿತಗೊಳಿಸಿದೆ ಎಂದು ಹೇಳಲಾಗಿದೆ. ತೈಲ ಬೆಲೆಗಳ ಜಾಗತಿಕ ಕುಸಿತ ಮತ್ತು ಎಲ್ಪಿಜಿ ಸಿಲಿಂಡರ್ ದರದಲ್ಲಿ ಆಗಾಗ ಏರಿಕೆ ಆಗುವುದರಿಂದ ಸಬ್ಸಿಡಿ ಯೋಜನೆಯನ್ನು ಕೈ ಬಿಡಲಾಗಿದೆ ಎನ್ನಲಾಗಿದೆ.
ಸೆಪ್ಟಂಬರ್ 1ರ ವೇಳೆಗೆ ಸಬ್ಸಿಡಿ ಸಹಿತ ಮತ್ತು ಸಬ್ಸಿಡಿ ರಹಿತವಾದ 14.2 ಕೆಜಿ ಅಡುಗೆ ಅನಿಲ ಸಿಲಿಂಡರ್ ದರ 594 ರೂಪಾಯಿ ಇದ್ದು ಇನ್ನು ಮುಂದೆ ನೇರ ಲಾಭ ವರ್ಗಾವಣೆ ಯೋಜನೆ ಅಡಿಯಲ್ಲಿ ಸಬ್ಸಿಡಿಯನ್ನು ಗ್ರಾಹಕರ ಖಾತೆಗೆ ಪಾವತಿಸಬೇಕಾಗಿಲ್ಲ ಎಂದು ಹೇಳಲಾಗಿದೆ.
ಪ್ರಸಕ್ತ ಹಣಕಾಸು ವರ್ಷದ ಆರಂಭದಿಂದಲೂ ಸಬ್ಸಿಡಿ ಮತ್ತು ಸಬ್ಸಿಡಿ ರಹಿತ ಎಲ್.ಪಿ.ಜಿ. ಸಿಲಿಂಡರ್ ಬೆಲೆಯಲ್ಲಿ ಅಂತರ ಕಡಿಮೆಯಾಗುತ್ತಿರುವುದರಿಂದ ಕಳೆದ ನಾಲ್ಕು ತಿಂಗಳಿನಿಂದ ಯಾವುದೇ ಫಲಾನುಭವಿಗಳ ಖಾತೆಗೆ ಸಬ್ಸಿಡಿ ಹಣ ಜಮಾ ಮಾಡಿಲ್ಲ.
ಸಬ್ಸಿಡಿ ಯೋಜನೆಯಿಂದ ಈ ಹಣಕಾಸು ವರ್ಷದಲ್ಲಿ ಕೇಂದ್ರ ಸರ್ಕಾರ 20 ಸಾವಿರ ಕೋಟಿ ರೂಪಾಯಿ ಉಳಿಸಲಿದೆ. ಕೊರೋನಾ ಸಂಕಷ್ಟದ ಕಾರಣದಿಂದ ಪರಿಹಾರ ಯೋಜನೆಗಳಿಗೆ ಹೆಚ್ಚು ಹಣ ವ್ಯಯ ಆಗುತ್ತಿರುವುದರಿಂದ ಸರ್ಕಾರದ ಮೇಲೆ ಒತ್ತಡ ಹೆಚ್ಚಾಗಿದೆ.
ಹಣಕಾಸು ವರ್ಷದಲ್ಲಿ ಪೆಟ್ರೋಲಿಯಂ ಸಬ್ಸಿಡಿಯಾಗಿ 40,915 ರೂ. ಕೋಟಿ ರೂಪಾಯಿ ಮೀಸಲಿಡಲಾಗಿದೆ. ಎಲ್ಪಿಜಿ ಸಬ್ಸಿಡಿ ಹಂಚಿಕೆಯನ್ನು 37,256.21 ಕೋಟಿ ರೂ.ಗೆ ಹೆಚ್ಚಿಸಲಾಗಿದೆ. ಆದರೆ ಮೊದಲ ತ್ರೈಮಾಸಿಕ ಅವಧಿಯಲ್ಲಿ ಕೇವಲ 1900 ಕೋಟಿ ರೂಪಾಯಿ ಕಾಯ್ದಿರಿಸಲಾಗಿದೆ.
ತೈಲ ಕಂಪನಿಗಳು ಕಳೆದ ಜುಲೈನಲ್ಲಿ ಸಿಲಿಂಡರ್ ಗೆ 494.35 ರೂಪಾಯಿಯಿಂದ 594 ರೂಪಾಯಿಗೆ ಅಡುಗೆ ಅನಿಲ ಬೆಲೆ ಏರಿಕೆಯಾಗಿದೆ. ಇಲ್ಲದಿದ್ದರೆ ಸಿಲಿಂಡರ್ ಈಗಿನ ದರಕ್ಕಿಂತ 100 ರೂಪಾಯಿ ಕಡಿಮೆಯಾಗುತ್ತಿತ್ತು ಎಂದು ಹೇಳಲಾಗಿದೆ.