ಬೆಂಗಳೂರು: ಸ್ಯಾಂಡಲ್ ವುಡ್ ಡ್ರಗ್ಸ್ ಮಾಫಿಯಾ ವಿಚಾರವಾಗಿ ಪ್ರತಿಕ್ರಿಯಿಸಿರುವ ನಟ ಚೇತನ್, ಪ್ರಸ್ತುತ ಎಲ್ಲರ ಗಮನ ಮಾದಕ ವಸ್ತುಗಳನ್ನು ಖಾಸಗಿಯಾಗಿ ಬಳಸುವ ಚಲನಚಿತ್ರ ಸಿಬ್ಬಂದಿ ಮತ್ತು ನಟರನ್ನು ಬಹಿರಂಗಪಡಿಸುವುದರ ಮೇಲಿದೆ. ಮಾದಕ ವಸ್ತುಗಳ ಬಗ್ಗೆ ಪ್ರಚೋದನೆ ನೀಡುವ ಜಾಹೀರಾತುಗಳ ಬಗ್ಗೆ ಕ್ರಮಕ್ಕೆ ಮುಂದಾಗದಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.
ಕೇವಲ ಹಣಕ್ಕಾಗಿ ಮದ್ಯ (ಸೋಡ), ಗುಟ್ಕಾ/ಪಾನ್ ಮಸಾಲಾ, ಜೂಜು (ರಮ್ಮಿ) ಇತ್ಯಾದಿಗಳ ಬಗ್ಗೆ ಮುಕ್ತವಾಗಿ ಜಾಹೀರಾತು ನೀಡುವ ಸ್ಟಾರ್ಸ್ ಗಳ ಮೇಲೆ ಬೆರಳು ತೋರಿಸದಿರುವುದು ಮೋಸವಲ್ಲವೇ? ಇವರು ಸಾಮಾಜಿಕ ದುಷ್ಕೃತ್ಯಗಳ ರಾಯಭಾರಿಗಳಲ್ಲವೇ? ಎಂದು ಕಿಡಿಕಾರಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿರುವ ಚೇತನ್, ನಮ್ಮೊಂದಿಗೆ ಇರದ ವ್ಯಕ್ತಿಯ ಬಗ್ಗೆ ಆರೋಪ ಮಾಡುವುದು ದುಃಖಕರ. ಮಾದಕ ವಸ್ತುಗಳ ಬಗ್ಗೆ ಜಾಗೃತಿ ಮೂಡಿಸುವುದು, ಪುನರ್ವಸತಿ ಕಾರ್ಯಕ್ರಮಗಳು, ಸರ್ಕಾರದ ಉತ್ತಮ ನೀತಿಗಳು. ಮಸಿ ಬಳಿಯುವುದು, ಉದ್ರೇಕಕಾರಿ ಹೇಳಿಕೆಗಳು ನಮಗೆ ಬೇಡವಾದದ್ದು ಎಂದು ತಿಳಿಸಿದ್ದಾರೆ.