ಬೆಂಗಳೂರು: ಅವಧಿ ಮುಗಿದರೂ ಕೊರೋನಾ ಕಾರಣದಿಂದ ಮುಂದೂಡಲ್ಪಟ್ಟಿರುವ ಗ್ರಾಮ ಪಂಚಾಯಿತಿ ಚುನಾವಣೆಗೆ ಕಾಲ ಕೂಡಿ ಬಂದಿದೆ.
ಅಕ್ಟೋಬರ್ ಮೊದಲ ವಾರ ಇಲ್ಲವೇ ಎರಡನೇ ವಾರದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ನಡೆಯಬಹುದು. ಸಾರ್ವತ್ರಿಕವಾಗಿ ಏಕಕಾಲಕ್ಕೆ ಚುನಾವಣೆ ನಡೆಸುವ ಬದಲು ಬಹುಹಂತಗಳಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಚುನಾವಣಾ ಆಯೋಗಕ್ಕೆ ಜಿಲ್ಲಾಧಿಕಾರಿಗಳು ಈ ಕುರಿತಾಗಿ ಸಲಹೆ ನೀಡಿದ್ದಾರೆ ಎನ್ನಲಾಗಿದೆ.
ಕೊರೋನಾ ನಿಯಮಗಳನ್ನು ಪಾಲಿಸುವ ಮೂಲಕ ಚುನಾವಣೆ ನಡೆಸಲು ಚುನಾವಣಾ ಆಯೋಗ ಕ್ರಮಕೈಗೊಂಡಿದೆ. ಮೀಸಲಾತಿ ಪಟ್ಟಿ ಸಿದ್ದವಾಗಿದ್ದು ಎಲ್ಲ ಜಿಲ್ಲಾಧಿಕಾರಿಗಳು ಗ್ರಾಮ ಪಂಚಾಯಿತಿ ಚುನಾವಣೆ ನಡೆಯುವ ಮತದಾರರ ಪಟ್ಟಿಯನ್ನು ಪ್ರಕಟಿಸಿದ್ದಾರೆ.
ಮೀಸಲಾತಿ ಅಂತಿಮಗೊಂಡು, ಮತದಾರರ ಪಟ್ಟಿ ಪ್ರಕಟವಾದ 45 ದಿನಗಳ ಒಳಗೆ ಚುನಾವಣೆ ನಡೆಸಬೇಕಿರುವುದರಿಂದ ಚುನಾವಣಾ ಆಯೋಗ ಸಿದ್ಧತೆ ಕೈಗೊಂಡಿದೆ. ಕೇಂದ್ರ ಚುನಾವಣಾ ಆಯೋಗ ಕೊರೋನಾ ಸಂದರ್ಭದಲ್ಲಿ ಚುನಾವಣೆ ನಡೆಸಲು ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದ್ದು ಇದರ ಅನ್ವಯ ಗ್ರಾಮ ಪಂಚಾಯಿತಿ ಚುನಾವಣೆ ನಡೆಸಲಾಗುವುದು ಎಂದು ಹೇಳಲಾಗಿದೆ.