ಮಂಡ್ಯ: ರಾಜಕಾರಣಿಗಳ ಮಕ್ಕಳು ಆರ್ಥಿಕವಾಗಿ ಸದೃಢವಾಗಿರುವುದರಿಂದ ಡ್ರಗ್ಸ್ ನಂತಹ ವ್ಯಸನಗಳಿಂದ ಕೆಡಲು ಹೆಚ್ಚು ಅವಕಾಶಗಳಿರುತ್ತವೆ. ಹಾಗಾಗಿ ಡ್ರಗ್ಸ್ ಜಾಲವನ್ನು ಮಟ್ಟಹಾಕಲೇಬೇಕು ಎಂದು ಮಾಜಿ ಸಚಿವ ಹೆಚ್ ವಿಶ್ವನಾಥ್ ತಿಳಿಸಿದ್ದಾರೆ.
ಡ್ರಗ್ಸ್ ಜಾಲದ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಡ್ರಗ್ಸ್ ಜಾಲವನ್ನು ಸಂಪೂರ್ಣವಾಗಿ ನಿಷೇಧಿಸಲೇಬೇಕಾದ ಅಗತ್ಯವಿದೆ. ಇಲ್ಲವಾದಲ್ಲಿ ನಮ್ಮ ಮಕ್ಕಳೇ ಹಾಳಾಗಿ ಬಿಡುವ ಪರಿಸ್ಥಿತಿಯಿದೆ. ಡ್ರಗ್ಸ್ ಜಾಲ ವ್ಯಾಪಕವಾಗಿ ಹರಡುತ್ತಿದ್ದು, ಈಗ ಯಾರನ್ನಾದರೂ ಸಾಯಿಸಿ ತಾನು ಬೆಳೆಯಬೇಕೆಂಬ ಸ್ಥಿತಿಯಿದೆ. ಸರ್ಕಾರವೇ ಡ್ರಗ್ಸ್ ಜಾಲವನ್ನು ಬೇಧಿಸಬೇಕು ಎಂದರು.
ಸಮಾಜದಲ್ಲಿ ಎಲ್ಲ ಮಕ್ಕಳೂ ಒಂದೇ ಸಮಾನ. ಮಕ್ಕಳನ್ನು ರಕ್ಷಣೆ ಮಾಡುವುದು ನಮ್ಮೆಲ್ಲರ ಕರ್ತವ್ಯ. ಆದರೆ ಇತರ ಮಕ್ಕಳಿಗಿಂತ ರಾಜಕಾರಣಿಗಳ ಮಕ್ಕಳು ಕೆಡಲು ಹೆಚ್ಚು ಅವಕಾಶಗಳಿರುತ್ತವೆ. ಕಾರಣ ಅವರಿಗೆ ಎಲ್ಲ ವಿಧದ ಸವಲತ್ತುಗಳಿರುತ್ತವೆ. ಚೆನ್ನಾಗಿ ಇರುತ್ತಾರೆ. ಹೀಗಾಗಿ ಕೆಡವ ಸಾಧ್ಯತೆಗಳು ಸಾಕಷ್ಟಿರುತ್ತವೆ ಎಂದು ತಿಳಿಸಿದರು.