ಬೆಂಗಳೂರು: ಸ್ಯಾಂಡಲ್ ವುಡ್ ಗೆ ಡ್ರಗ್ಸ್ ಮಾಫಿಯಾ ನಂಟು ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರ ಸಿಸಿಬಿ ವಿಚಾರಣೆ ಅಂತ್ಯಗೊಂಡಿದೆ. ಡ್ರಗ್ಸ್ ಜಾಲದಲ್ಲಿ ಸಿಲುಕಿರುವ ಕನ್ನಡ ಚಿತ್ರರಂಗದ 10-15 ನಟ-ನಟಿ, ನಿರ್ದೇಶಕರ ಹೆಸರನ್ನು ಇಂದ್ರಜಿತ್ ಸಿಸಿಬಿಗೆ ನೀಡಿದ್ದಾರೆ.
ಡ್ರಗ್ಸ್ ಮಾಫಿಯಾ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಇಂದ್ರಜಿತ್ ಲಂಕೇಶ್ ಸಿಸಿಬಿ ಮುಂದೆ ವಿಚಾರಣೆಗೆ ಹಾಜರಾಗಿದ್ದು, ಸತತ 4 ಗಂಟೆಗಳ ಕಾಲ ಸಿಸಿಬಿ ಅಧಿಕಾರಿಗಳು ಇಂದ್ರಜಿತ್ ವಿಚಾರಣೆ ನಡೆಸಿದ್ದಾರೆ.
ಸಿಸಿಬಿ ವಿಚಾರಣೆ ಬಳಿಕ ಮಾತನಾಡಿದ ಇಂದ್ರಜಿತ್ ಲಂಕೇಶ್, ಸಮಾಜದ ಹಿತದೃಷ್ಟಿಯಿಂದ, ಮುಂದಿನ ಪೀಳಿಗೆಗಳ ರಕ್ಷಣೆಗಾಗಿ ನಾನು ಇಂದು ಸಿಸಿಬಿ ಮುಂದೆ ಡ್ರಗ್ಸ್ ಜಾಲದಲ್ಲಿ ಭಾಗಿಯಾಗಿರುವವರ ಬಗ್ಗೆ ನನಗಿರುವ ಮಾಹಿತಿ ಹೇಳಿದ್ದೇನೆ. 10-15 ಜನರ ಹೆಸರು ಕೊಟ್ಟಿದ್ದೇನೆ. ನನ್ನ ಬಳಿ ಇರುವ ಎಲ್ಲಾ ಸಾಕ್ಷಿಗಳನ್ನು ಅಧಿಕಾರಿಗಳಿಗೆ ನೀಡಿದ್ದೇನೆ. ಅವರು ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳುವ ಭರವಸೆಯಿದೆ ಎಂದರು.
ನಾನು ಅಧಿಕಾರಿಗಳಿಗೆ ನೀಡಿದ ಹೆಸರನ್ನು ಮಾಧ್ಯಮಗಳಿಗೆ ಬಹಿರಂಗಮಾಡಲು ಸಾಧ್ಯವಿಲ್ಲ. ಕಾರಣ ನಾನು ಈ ಹಿಂದೆ ಹೇಳಿದಂತ ನನಗೆ ರಕ್ಷಣೆ ನೀಡಿದರೆ ತನಿಖಾಧಿಕಾರಿಗಳಿಗೆ ಮಾಹಿತಿ ನೀಡುತ್ತೇನೆ ಎಂದು ಹೇಳಿದ್ದೆ. ಅದರಂತೆ ಸಿಸಿಬಿ ಅಧಿಕಾರಿಗಳು ನನಗೆ ರಕ್ಷಣೆ ನೀಡಿದ್ದಾರೆ. ಹಾಗಾಗಿ ನಾನು ಬಹಿರಂಗವಾಗಿ ಹೆಸರನ್ನು ತಿಳಿಸಲಾಗದು. ಸಿಸಿಬಿ ಅಧಿಕಾರಿಗಳೇ ತನಿಖೆ ಬಳಿಕ ಇನ್ನು ಕೆಲದಿನಗಳಲ್ಲಿ ಡ್ರಗ್ಸ್ ಜಾಲದಲ್ಲಿ ಬಾಗಿಯಾಗಿರುವ ಚಿತ್ರರಂಗದವರ ಹೆಸರನ್ನು ಬಹಿರಂಗ ಮಾಡಲಿದ್ದಾರೆ ಎಂದು ತಿಳಿಸಿದರು.
ನಾನು ಕೊಟ್ಟ ಹಲವು ಮಾಹಿತಿಗೆ ಅಧಿಕಾರಿಗಳು ಖುಷಿಯಾಗಿದ್ದಾರೆ. ಅಲ್ಲದೇ ಡ್ರಗ್ಸ್ ಮಾಪಿಯಾದಲ್ಲಿನ ಕೆಲವರ ಹೆಸರು ಕೇಳಿ ಶಾಕ್ ಕೂಡ ಆಗಿದ್ದಾರೆ. ನಾನೊಬ್ಬ ಪತ್ರಕರ್ತನಾಗಿ, ಸಮಾಜದ ಹಿತದೃಷ್ಟಿಯಿಂದ, ಡ್ರಗ್ಸ್ ಮಾಫಿಯಾ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಹಾಗೂ ದಾರಿತಪ್ಪುತ್ತಿರುವ ಮುಂದಿನ ಪೀಳಿಗೆ ಮಾರ್ಗಕ್ಕೆ ಕಡಿವಾಣಹಾಕಲು ನನ್ನ ಬಳಿ ಇರುವ ಎಲ್ಲಾ ಮಾಹಿತಿಗಳು ಅಧಿಕಾರಿಗಳಿಗೆ ನೀಡಿದ್ದಾಗಿ ತಿಳಿಸಿದರು.