ಆಡಳಿತದಲ್ಲಿ ಮತ್ತಷ್ಟು ಪಾರದರ್ಶಕತೆ ಹಾಗೂ ಸಮರ್ಪಕತೆ ತರಲು ಚಿಂತನೆ ನಡೆಸುತ್ತಿರುವ ಕೇಂದ್ರ ಸರ್ಕಾರ ತನ್ನ ವಿವಿಧ ಮಂತ್ರಾಲಯಗಳಲ್ಲಿ ಕೆಲಸ ಮಾಡುವ ಭ್ರಷ್ಟ ಅಧಿಕಾರಿಗಳನ್ನು ನೌಕರಿಯಿಂದ ಕಿತ್ತೊಗೆಯಲು ನೋಡುತ್ತಿದೆ.
ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ 30 ವರ್ಷಗಳ ಸೇವೆ ಪೂರೈಸಿದ, ಭ್ರಷ್ಟ ಹಾಗೂ ಅಸಮರ್ಪಕ ಅಧಿಕಾರಿಗಳು ಹಾಗೂ ಇತರ ಸಿಬ್ಬಂದಿಯನ್ನು, ಸಾರ್ವಜನಿಕ ಹಿತಾಸಕ್ತಿಯ ದೃಷ್ಟಿಯಿಂದ, ಅವರನ್ನು ಸೇವೆಯಿಂದ ವಜಾಗೊಳಿಸುವ ಸಾಧ್ಯತೆಗಳು ಇವೆ ಎಂದು ಸಿಬ್ಬಂದಿ ಹಾಗೂ ತರಬೇತಿ ಇಲಾಖೆಯ ಮೂಲಗಳು ತಿಳಿಸಿವೆ.
ಕೇಂದ್ರ ಸಾರ್ವಜನಿಕ ಸೇವೆಗಳು (ಪಿಂಚಣಿ), 1972ರ ಕಾಯಿದೆಯ ಮೂಲ ನಿಯಮಗಳಾದ (FR) 56 (J) ಮತ್ತು 56(I) ಹಾಗೂ 48 (1) (b)ಗಳನ್ನು ಬಳಸಿಕೊಂಡು ಈ ಮೇಲ್ಕಂಡ ವರ್ಗದ ನೌಕರರ ಸೇವಾ ಕ್ಷಮತೆಯನ್ನು ಅಳೆಯಲಾಗುವುದು ಎಂದು ಇಲಾಖೆಯ ಮೂಲಗಳು ತಿಳಿಸಿವೆ.