ನವದೆಹಲಿ: ಸ್ವಾವಲಂಬಿ ಭಾರತ ದೇಶದ ಭವಿಷ್ಯಕ್ಕೆ ಅತ್ಯಗತ್ಯವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
‘ಮನ್ ಕಿ ಬಾತ್’ನಲ್ಲಿ ಮಾತನಾಡಿದ ಅವರು, ವಿಜ್ಞಾನದ ಬಗ್ಗೆ ಮಕ್ಕಳು ಹೆಚ್ಚಿನ ಆಸಕ್ತಿ ಹೊಂದಬೇಕು. ವಿಜ್ಞಾನದ ಮೇಲಿನ ಆಸಕ್ತಿ ಮಕ್ಕಳಲ್ಲಿ ಸಂಶೋಧನೆಗೆ ಪ್ರೇರೇಪಣೆ ನೀಡುತ್ತದೆ. ವಿದ್ಯಾರ್ಥಿಗಳಿಗೆ ಬಳಕೆಯಾಗುವ ಆಪ್ ಗಳಿವೆ. ಶಿಕ್ಷಣ ಸಂಬಂಧಿತ ಆಪ್ ಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದ್ದಾರೆ.
ಮಕ್ಕಳ ಆಹಾರ ಮತ್ತು ಆರೋಗ್ಯದ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕು. ಮಕ್ಕಳ ಆರೋಗ್ಯ ಕಾಪಾಡುವಲ್ಲಿ ಪೋಷಕರ ಪಾತ್ರ ಮಹತ್ವದ್ದಾಗಿದೆ. ಮಕ್ಕಳು ಆರೋಗ್ಯವಾಗಿದ್ದರೆ ಉತ್ತಮ ಭವಿಷ್ಯ ನಿರ್ಮಾಣ ಮಾಡಲು ಸಾಧ್ಯ. ಆಟಿಕೆಗಳಿಂದ ಮಕ್ಕಳ ಬೌದ್ಧಿಕ ವಿಕಸನ ವೃದ್ಧಿಯಾಗುವಂತಿರಬೇಕು ಎಂದಿದ್ದಾರೆ.
ಆತ್ಮವಿಶ್ವಾಸದಿಂದ ಆತ್ಮ ನಿರ್ಭರ ಭಾರತ ನಿರ್ಮಾಣ ಮಾಡಬೇಕು. ಭಾರತದಲ್ಲಿ ಭಾರತದ ಕಂಪ್ಯೂಟರ್ ಗೇಮ್ ಗಳು ಇರಬೇಕು. ಆತ್ಮವಿಶ್ವಾಸದಿಂದ ಭಾರತವನ್ನು ಸ್ವಾವಲಂಬಿ ಮಾಡಬೇಕು. ಆತ್ಮ ನಿರ್ಭರ ಇನ್ನೋವೇಷನ್ ಚಾಲೆಂಜ್ ನಲ್ಲಿ ಭಾಗಿಯಾಗಬೇಕು. ಹಲವು ಯುವಜನತೆ ಈ ಚಾಲೆಂಜ್ ನಲ್ಲಿ ಭಾಗಿಯಾಗಿದ್ದಾರೆ. ಆಟವಾಡುತ್ತಲೇ ಮಕ್ಕಳು ಹಲವು ವಿಷಯ ಕಲಿಯುತ್ತಾರೆ. ಸ್ವದೇಶಿ ಆಟಗಳನ್ನು ಕಂಪ್ಯೂಟರ್ ಗೇಮ್ ಗಳಲ್ಲಿ ಅಳವಡಿಸಿ ಎಂದು ಸಲಹೆ ನೀಡಿದ್ದಾರೆ.
ಭಾರತೀಯ ಕೃಷಿ ಕೋಶವನ್ನು ಸಿದ್ಧಪಡಿಸಲಾಗುತ್ತಿದೆ. ದೇಶದಲ್ಲಿ ಎಲ್ಲರೂ ಪೌಷ್ಟಿಕ ಆಹಾರ ಸೇವಿಸುವಂತೆ ಆಗಬೇಕು. ಜನರ ಪಾಲ್ಗೊಳ್ಳುವಿಕೆಯಿಂದ ಪೌಷ್ಟಿಕ ಆಹಾರ ಸೇವನೆಯ ಆಂದೋಲನವಾಗಿ ರೂಪುಗೊಳ್ಳುತ್ತದೆ. ದೇಶದ ಸೈನಿಕರು ಪ್ರಾಣ ಒತ್ತೆ ಇಟ್ಟು ಗಡಿ ಕಾಯುತ್ತಿದ್ದಾರೆ. ದೇಶದ ಗಡಿಯುದ್ದಕ್ಕೂ ಸೈನಿಕರು ಹದ್ದಿನ ಕಣ್ಣಿಟ್ಟು ಕಾಯುತ್ತಿದ್ದು, ದೇಶಕ್ಕಾಗಿ ಸೈನಿಕರು ಹುತಾತ್ಮರಾಗಿದ್ದಾರೆ. ಭದ್ರತೆಯಲ್ಲಿ ನಮ್ಮ ಸೇನೆಯಲ್ಲಿರುವ ನಾಯಿಗಳ ಪಾತ್ರವೂ ಮಹತ್ವದ್ದಾಗಿದೆ ಎಂದು ತಿಳಿಸಿದ್ದಾರೆ.