ಹೈದ್ರಾಬಾದ್: ನಗರದ ಪ್ರಸಿದ್ಧ ನೆಕ್ಲೆಸ್ ರಸ್ತೆಗೆ ಮಾಜಿ ಪ್ರಧಾನಿ ದಿವಂಗತ ಪಿ.ವಿ. ನರಸಿಂಹರಾವ್ ಅವರ ಹೆಸರನ್ನು ಮರು ನಾಮಕರಣ ಮಾಡಿ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಆದೇಶಿಸಿದ್ದಾರೆ. ಪಿವಿ ಜ್ಞಾನಮಾರ್ಗ ಎಂದು ಹೆಸರಿಸಲಾಗಿದ್ದು, ಅವರ ನೆನಪಿಗಾಗಿ ಅಲ್ಲಿ ಒಂದು ಪ್ರತಿಮೆಯನ್ನೂ ಸ್ಥಾಪಿಸುವುದಾಗಿ ತಿಳಿಸಿದ್ದಾರೆ.
ಪಿ.ವಿ. ನರಸಿಂಹ ರಾವ್ ಅವರಿಗೆ ಮರಣೋತ್ತರ ಭಾರತ ರತ್ನ ಪ್ರಶಸ್ತಿ ನೀಡುವಂತೆ ಮುಂದಿನ ವಿಧಾನಸಭೆ ಅಧಿವೇಶನದಲ್ಲಿ ನಿರ್ಣಯ ಕೈಗೊಂಡು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವುದಾಗಿ ತಿಳಿಸಿದ್ದಾರೆ.
ಪಿ.ವಿ. ನರಸಿಂಹ ರಾವ್ ಅವರು ತೆಲಂಗಾಣ ಪ್ರದೇಶಕ್ಕೆ ಸೇರಿದವರಾಗಿದ್ದು, 1991 ರಿಂದ 96 ರವರೆಗೆ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಸಾಕಷ್ಟು ಆರ್ಥಿಕ ಸುಧಾರಣೆಗಳನ್ನು ಜಾರಿಗೆ ತಂದಿದ್ದರು. 2004 ರ ಡಿಸೆಂಬರ್ 24 ರಂದು ಅವರು ವಿಧಿವಶರಾಗಿದ್ದರು.