ನವದೆಹಲಿ: ಚೆನ್ನೈ ಸೂಪರ್ ಕಿಂಗ್ಸ್ ತಂಡದ ಉಪನಾಯಕ ಸುರೇಶ್ ರೈನಾ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಲಭ್ಯವಿರುವುದಿಲ್ಲ ಎಂದು ತಂಡದ ಸಿಇಒ ಕೆ.ಎಸ್. ವಿಶ್ವನಾಥ್ ಟ್ವೀಟ್ ಮಾಡಿದ್ದರು.
ಅಂತೆಯೇ ಚೆನ್ನೈ ಸೂಪರ್ ಕಿಂಗ್ಸ್ ತಂಡ ಕೂಡ ಟ್ವೀಟ್ ಮಾಡಿ, ಸುರೇಶ್ ರೈನಾ ವೈಯಕ್ತಿಕ ಕಾರಣದಿಂದ ಭಾರತಕ್ಕೆ ಮರಳಿದ್ದಾರೆ. ಐಪಿಎಲ್ ಋತುವಿನಲ್ಲಿ ಅವರು ಲಭ್ಯವಿರುವುದಿಲ್ಲ. ಸುರೇಶ್ ರೈನಾ ಮತ್ತು ಅವರ ಕುಟುಂಬಕ್ಕೆ ತಂಡದ ಸಂಪೂರ್ಣ ಬೆಂಬಲವಿರುತ್ತದೆ ಎಂದು ಹೇಳಲಾಗಿದೆ.
ಸುರೇಶ್ ರೈನಾ ದುಬೈನಿಂದ ಭಾರತಕ್ಕೆ ಮರಳಲು ಕಾರಣ ಅವರ ಮಾವ ಹತ್ಯೆಯಾಗಿದ್ದಾರೆ. ಸುರೇಶ್ ರೈನಾ ಅವರ ಮಾವ ಪಠಾಣ್ ಕೋಟ್ ಥಾರಿಯಲ್ ನಲ್ಲಿ ನೆಲೆಸಿದ್ದಾರೆ. ಅವರ ನಿವಾಸದ ಮೇಲೆ ದುಷ್ಕರ್ಮಿಗಳು ದಾಳಿ ಮಾಡಿದ್ದು ಮಾವ ಮೃತಪಟ್ಟಿದ್ದಾರೆ. ಅತ್ತೆಯ ಸ್ಥಿತಿ ಗಂಭೀರವಾಗಿದೆ.
ಕುಟುಂಬದವರು ಮನೆಯ ಟೆರೇಸ್ ಮೇಲೆ ಮಲಗಿದ್ದಾಗ ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದು ಸುರೇಶ್ ರೈನಾ ಅವರ ಮಾವ ಅಶೋಕ್ ಕುಮಾರ್ ಸಾವನ್ನಪ್ಪಿದ್ದಾರೆ. ಅತ್ತೆ ಆಶಾದೇವಿ ಆಸ್ಪತ್ರೆಯಲ್ಲಿ ಜೀವನ್ಮರಣದ ನಡುವೆ ಹೋರಾಟ ನಡೆಸಿದ್ದಾರೆ. ಅಶೋಕ್ ಕುಮಾರ್ ಅವರ 80 ವರ್ಷದ ತಾಯಿಯ ಮತ್ತು ಇಬ್ಬರು ಸೋದರ ಸಂಬಂಧಿಗಳ ಮೇಲೆಯೂ ದಾಳಿ ನಡೆಸಲಾಗಿದೆ. ಪಂಜಾಬ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸಿದ್ದಾರೆ.