ಬೆಂಗಳೂರು: ಕನ್ನಡ ಚಿತ್ರರಂಗಕ್ಕೆ ಡ್ರಗ್ಸ್ ಮಾಫಿಯಾ ನಂಟು ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಮ್ಮೆ ಸ್ಪಷ್ಟನೆ ನೀಡಿರುವ ನಿರ್ದೇಶಕ ಇಂದ್ರಜಿತ್ ಲಂಕೇಶ್, ಇಂಡಸ್ಟ್ರಿಗೆ ಇತ್ತೀಚೆಗೆ ಬಂದಿರುವ ಮೂರನೇ ತಲೆಮಾರುಗಳಿಂದ ಚಿತ್ರರಂಗ ಡ್ರಗ್ಸ್ ಜಾಲದಲ್ಲಿ ಸಿಲುಕಿದೆ. ಖ್ಯಾತ ರಾಜಕಾರಣಿಗಳ ಮನೆ, ನಟರ ಎಸ್ಟೇಟ್ ಗಳಲ್ಲೂ ಡ್ರಗ್ಸ್ ದಂಧೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
ನಮ್ಮ ಕನ್ನಡ ಚಿತ್ರರಂಗ ಸಾಂಪ್ರದಾಯಿಕವಾಗಿದ್ದ ಚಿತ್ರರಂಗ. ಈ ಹಿಂದೆ ಚಿತ್ರರಂಗದಲ್ಲಿ ಈ ರೀತಿ ಚಟುವಟಿಕೆಗಳು ಇರಲಿಲ್ಲ. ಈಗ ಚಿತ್ರೀಕರಣ ವೇಳೆ ರೇವ್ ಪಾರ್ಟಿ ಸೇರಿ ಹಲವು ರೀತಿಯದ್ದು ನಡೆಯುತ್ತೆ. ಇದರಲ್ಲಿ ಇಂದಿನ ಹಲವು ನಟ-ನಟಿಯರು, ನಿರ್ದೇಶಕರು, ಪತ್ರಕರ್ತರು ಕೂಡ ಭಾಗಿಯಾಗುತ್ತಾರೆ ಎಂದರು.
ಕೊರೊನಾ ಲಾಕ್ ಡೌನ್ ವೇಳೆ 3.5 ಕೋಟಿಯಿಂದ 4 ಕೋಟಿ ರೂ. ಡ್ರಗ್ಸ್ ದಂಧೆ ನಡೆದಿದೆ. ಕನ್ನಡ ಚಿತ್ರರಂಗದ ಕೆಲವರು ಡ್ರಗ್ಸ್ ಗಾಗಿ ಈ ಹಣ ನೀಡಿದ್ದಾರೆ ಎಂಬ ಬಗ್ಗೆ ಮಾಹಿತಿ ಇದೆ. ಕೆಲ ನಟರ ಎಸ್ಟೇಟ್ ಗಳಿಗೆ ಡ್ರಗ್ಸ್ ಸಪ್ಲೈ ಆಗಿದೆ. ರಾಜಕಾರಣಿಗಳ ಮಕ್ಕಳು ಕೂಡ ನಟಿಯರು ಮತ್ತು ನಶೆಯ ಗುಂಗಿಗೆ ಸಿಲುಕಿದ್ದಾರೆ ಎಂದು ಆರೋಪಿಸಿದರು.
ಕಾರಿನಲ್ಲಿಯೇ ಡ್ರಗ್ಸ್ ಸಿಕ್ಕಿದರೂ ಪೊಲೀಸರು ಕ್ರಮ ಕೈಗೊಳ್ಳುತ್ತಿಲ್ಲ. ಕಾರಣ ರಾಜಕಾರಣಿಗಳ ಮಕ್ಕಳು ಇದರಲ್ಲಿ ಭಾಗಿಯಾಗಿರುವುದರಿಂದ ಅವರ ಒತ್ತಡಕ್ಕೆ ಮಣಿದು ಪೊಲೀಸರು ಸುಮ್ಮನಿದ್ದಾರೆ. ಈ ಮಾಫಿಯಾಗೆ ಕಡಿವಾಣ ಹಾಕಬೇಕಿದೆ. ಇದು ಹೀಗೇ ಮುಂದುವರಿದರೆ ಯುವ ನಟ-ನಟಿಯರು, ಯುವ ಪೀಳಿಗೆಯ ಹೆಣಗಳು ಬೀಳುತ್ತವೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.