ಬೆಳಗಾವಿ: ರಾಯಣ್ಣ ಮೂರ್ತಿ ಪ್ರತಿಷ್ಠಾಪನೆ ವಿವಾದ ವಿಚಾರವಾಗಿ ಪ್ರತಿಕ್ರಿಯಿಸಿರುವ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ, ಬೆಳಗಾವಿಯ ಪೀರನವಾಡಿಯಲ್ಲಿ ಆಗಿರುವ ತೀರ್ಮಾನ ದೇಶಕ್ಕೆ ಮಾದರಿ. ಇದರಿಂದ ರಾಷ್ಟ್ರಭಕ್ತರಿಗೆ ಸಂತಸವಾಗಿದೆ ಎಂದು ಹೇಳಿದರು.
ಬೆಳಗಾವಿಯಲ್ಲಿ ಮಾತನಾಡಿದ ಅವರು, ರಾಯಣ್ಣ ಮೂರ್ತಿ ಪ್ರತಿಷ್ಠಾಪನೆ ವಿವಾದ ಇಷ್ಟು ಸುಲಭವಾಗಿ ಬಗೆಹರಿಯಲಿದೆ ಎಂದು ತಿಳಿದಿರಲಿಲ್ಲ. ಶಿವಾಜಿ, ರಾಯಣ್ಣ ವಿವಾದ ಇತ್ಯರ್ಥವಾಗಿದೆ. ದೇಶದ ಸ್ವಾತಂತ್ರ್ಯ ಹೋರಾಟಕ್ಕಾಗಿ ಇಬ್ಬರ ಹೋರಾಟ ಅವಿಸ್ಮರಣೀಯ. ಕೆಲ ಸಂಕುಚಿತ ಭಾವನೆಯಿಂದಾಗಿ ವಿವಾದ ಉಂಟಾಗಿತ್ತು. ಶಿವಾಜಿ, ರಾಯಣ್ಣ ಇಬ್ಬರೂ ಜಾತಿ, ಭಾಷೆ ಮೀರಿದವರು. ಈಗ ಬೆಳಗಾವಿಯಲ್ಲಾದ ಮೂರ್ತಿ ಪ್ರತಿಷ್ಠಾಪನೆಯಿಂದ ಎಲ್ಲರಿಗೂ ಸಂತಸವಾಗಿದೆ ಎಂದರು.
ನಿನ್ನೆ ನಡೆದ ಗಲಾಟೆ ಸಂಬಂಧ ಮೂರು ಪ್ರಕರಣಗಳು ದಾಖಲಾಗಿದ್ದು, ಪ್ರಕರಣ ವಾಪಸ್ ಪಡೆಯುವ ಬಗ್ಗೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಜತೆ ಮಾತನಾಡುತ್ತೇನೆ ಎಂದು ಹೇಳಿದ್ದಾರೆ.