ವಿಶ್ವವನ್ನು ಕಂಗೆಡಿಸಿರುವ ಮಾರಣಾಂತಿಕ ಕೊರೊನಾ ಮಹಾಮಾರಿಗೆ ಲಸಿಕೆ ಕಂಡು ಹಿಡಿಯಲು ಭಾರತ ಸೇರಿದಂತೆ ವಿಶ್ವದ ಎಲ್ಲ ರಾಷ್ಟ್ರಗಳು ನಿರಂತರವಾಗಿ ಪ್ರಯತ್ನ ನಡೆಸಿವೆ. ರಷ್ಯಾ ತಾನು ಈಗಾಗಲೇ ಲಸಿಕೆ ತಯಾರಿಸಿರುವುದಾಗಿ ಹೇಳಿಕೊಂಡಿದ್ದು, ಮಾನವರ ಮೇಲೆ ಪ್ರಯೋಗವನ್ನೂ ಆರಂಭಿಸಿದೆ.
ಭಾರತದಲ್ಲೂ ಸಹ ಲಸಿಕೆ ತಯಾರಾಗಿದ್ದು, ಎರಡು ಹಾಗೂ ಮೂರನೇ ಹಂತದ ಪರೀಕ್ಷೆಗಳು ನಡೆಯುತ್ತಿವೆ. ಇದರಲ್ಲಿ ಯಶಸ್ವಿಯಾದ ಬಳಿಕ ಮಾನವರ ಬಳಕೆಗೆ ಇದು ಲಭ್ಯವಾಗಲಿದೆ. ಇದರ ಮಧ್ಯೆ ಯಾರಿಗೆ ಮೊದಲಿಗೆ ಕೊರೊನಾ ಲಸಿಕೆ ನೀಡಲು ಆದ್ಯತೆ ನೀಡಬೇಕು ಎಂಬುದರ ಕುರಿತು ಅಧ್ಯಯನ ನಡೆದಿದೆ.
ಭಾರತದಂಥ ಬೃಹತ್ ರಾಷ್ಟ್ರದಲ್ಲಿ ಲಸಿಕೆಯನ್ನು ನೀಡುವುದು ಅಷ್ಟು ಸುಲಭವಿಲ್ಲ. ಹೀಗಾಗಿ ಈಗಾಗಲೇ ಕೊರೊನಾ ಸೋಂಕು ತಗುಲಿ ಗುಣಮುಖರಾಗುವ ಮೂಲಕ ಪ್ರತಿಕಾಯ ಬೆಳೆಸಿಕೊಂಡಿರುವವರಿಗೆ ಮೊದಲ ಹಂತದಲ್ಲಿ ಆದ್ಯತೆಯ ನೀಡದಿರಲು ನಿರ್ಧರಿಸಲಾಗಿದೆ. ಹಿರಿಯರು, ಈ ಮೊದಲೇ ಇತರೆ ಕಾಯಿಲೆಯಿಂದ ಬಳಲುತ್ತಿರುವವರು ಹಾಗೂ ಮಕ್ಕಳಿಗೆ ಮೊದಲು ಕೊರೊನಾ ಲಸಿಕೆ ನೀಡಲು ಪ್ರಾಶಸ್ತ್ಯ ನೀಡಲಾಗುತ್ತದೆ ಎಂದು ಹೇಳಲಾಗಿದೆ.