ಬಿಸಿ ಅನ್ನದ ಜತೆ ಬೆಂಡೆಕಾಯಿ ಸಾಂಬಾರು ಇದ್ದರೆ ಕೇಳಬೇಕೇ…? ಊಟ ಹೊಟ್ಟೆಗೆ ಇಳಿದಿದ್ದೇ ಗೊತ್ತಾಗಲ್ಲ. ಇಲ್ಲಿ ಸುಲಭವಾಗಿ ಮಾಡುವ ಬೆಂಡೆಕಾಯಿ ಸಾಂಬಾರು ಇದೆ. ಮನೆಯಲ್ಲಿ ಮಾಡಿ ಸವಿಯಿರಿ.
ಬೆಂಡೆಕಾಯಿಯನ್ನು ಚೆನ್ನಾಗಿ ತೊಳೆದು ಒಂದು ಬಟ್ಟೆಯ ಸಹಾಯದಿಂದ ಒರೆಸಿಕೊಂಡು ಹದ ಗಾತ್ರದಲ್ಲಿ ಕತ್ತರಿಸಿಕೊಳ್ಳಿ. ನಂತರ ಗ್ಯಾಸ್ ಮೇಲೆ ಒಂದು ಪ್ಯಾನ್ ಇಟ್ಟು ಅದಕ್ಕೆ 1 ಚಮಚ ಎಣ್ಣೆ ಹಾಕಿ ಅದು ಬಿಸಿಯಾಗುತ್ತಲೇ ಅದಕ್ಕೆ 1 ಚಮಚ ಕಡಲೆಬೇಳೆ, 1 ಚಮಚ ಉದ್ದಿನಬೇಳೆ, ಜೀರಿಗೆ 1 ಟೀ ಸ್ಪೂನ್, ಧನಿಯಾಬೀಜ 1 ಟೀ ಸ್ಪೂನ್ ಹಾಕಿ ಫ್ರೈ ಮಾಡಿ ನಂತರ ಇದಕ್ಕೆ ½ ಇಂಚಿನಷ್ಟು ಶುಂಠಿ, 8 ಎಸಳು ಬೆಳ್ಳುಳ್ಳಿ, 1 ಈರುಳ್ಳಿ ಕತ್ತರಿಸಿ ಹಾಕಿ ಫ್ರೈ ಮಾಡಿ ಗ್ಯಾಸ್ ಆಫ್ ಮಾಡಿ.
ಇದನ್ನು ಒಂದು ಮಿಕ್ಸಿ ಜಾರಿಗೆ ಹಾಕಿಕೊಂಡು ಸ್ವಲ್ಪ ಕೊತ್ತಂಬರಿಸೊಪ್ಪು, 1 ಹಸಿಮೆಣಸು,1/4 ಟೀ ಸ್ಪೂನ್ ಸಾಸಿವೆ, ಲಿಂಬೆಹಣ್ಣಿನ ಗಾತ್ರದ ಹುಣಸೆಹಣ್ಣು ಹಾಕಿ ಸ್ವಲ್ಪ ನೀರು ಸೇರಿಸಿ ರುಬ್ಬಿಕೊಳ್ಳಿ. ನಂತರ ಗ್ಯಾಸ್ ಮೇಲೆ ಒಂದು ಪ್ಯಾನ್ ಇಟ್ಟು ಅದಕ್ಕೆ ಸ್ವಲ್ಪ ಎಣ್ಣೆ ಹಾಕಿ ಕತ್ತರಿಸಿದ ಬೆಂಡೆಕಾಯಿ ಹಾಕಿ ಚಿಟಿಕೆ ಅರಿಶಿನ ಸೇರಿಸಿ ಬೆಂಡೆಕಾಯಿ ಲೋಳೆಗಳೆಲ್ಲಾ ಹೋಗುವವರೆಗೆ ಹುರಿದುಕೊಳ್ಳಿ.
ನಂತರ ರುಬ್ಬಿಟ್ಟುಕೊಂಡ ಮಸಾಲೆಯನ್ನು ಒಂದು ಪಾತ್ರೆಗೆ ಹಾಕಿ ಅದಕ್ಕೆ ಬೇಕಿರುವಷ್ಟು ನೀರು ಸೇರಿಸಿ ಸಣ್ಣ ತುಂಡು ಬೆಲ್ಲ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಕುದಿಸಿಕೊಳ್ಳಿ. ನಂತರ ಇದಕ್ಕೆ ಬೆಂಡೆಕಾಯಿ ಸೇರಿಸಿ ಕುದಿಸಿಕೊಂಡು ಗ್ಯಾಸ್ ಆಫ್ ಮಾಡಿದರೆ ರುಚಿಕರವಾದ ಸಾಂಬಾರು ಸವಿಯಲು ಸಿದ್ಧ.