ನವದೆಹಲಿ: ಕೊರೋನಾ ಲಾಕ್ಡೌನ್ ಕಾರಣದಿಂದ ಮುಂದೂಡಿಕೆಯಾಗಿದ್ದ ಇಎಂಐ ಪಾವತಿಗೆ ಇನ್ನೂ 4 ದಿನಗಳು ಬಾಕಿ ಇದೆ. ಆದಾಯ ಕೊರತೆಯ ನಡುವೆ ಮತ್ತೆ ಕಂತು ಪಾವತಿಸುವ ಅನಿವಾರ್ಯತೆ ಎದುರಾಗಿದೆ.
ಸೆಪ್ಟೆಂಬರ್ ನಿಂದ ಶಾಲೆ ಶುಲ್ಕ, ಇಎಂಐ, ಸಾರಿಗೆ ಮೊದಲಾದ ಖರ್ಚುವೆಚ್ಚಗಳಿಗೆ ಹಣ ಹೊಂದಿಸಬೇಕಾಗಿದ್ದು, ಬಡ, ಮಧ್ಯಮ ವರ್ಗದವರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಭಾರತೀಯ ರಿಸರ್ವ್ ಬ್ಯಾಂಕ್ ನೀಡಿದ್ದ ಸಾಲ ಮರುಪಾವತಿಯ ರಿಲೀಫ್ ಆಗಸ್ಟ್ 31 ಕ್ಕೆ ಮುಕ್ತಾಯವಾಗಲಿದೆ ಮುಂದಿನ ತಿಂಗಳಿನಿಂದ ಎಂದಿನಂತೆ ಕಂತು ಪಾವತಿಸಬೇಕಿದೆ.
ಶಾಲೆ, ಕಾಲೇಜ್ ಪುನಾರಂಭ ಸಾಧ್ಯತೆಯಿರುವುದರಿಂದ ಶುಲ್ಕವನ್ನೂ ಹೊಂದಿಸಬೇಕು. ಹೀಗೆ ಖರ್ಚಿನ ವಿವರ ತೀವ್ರ ಏರಿಕೆಯಾಗಿರುವುದು ಬಡ ಮಧ್ಯಮ ವರ್ಗದವರಿಗೆ ನುಂಗಲಾರದ ತುತ್ತಾಗಿದೆ. ಮಾರ್ಚ್ ತಿಂಗಳಿನಿಂದ ಆಗಸ್ಟ್ ವರೆಗೆ 6 ತಿಂಗಳ ಕಂತು ಮುಂದೂಡಿಕೆ ಆಗಿದೆ. ಆದರೆ ಈ ಅವಧಿಯಲ್ಲಿ ಬಡ್ಡಿಯ ಬರೆ ಬಿದ್ದಿದೆ. ಬಡ್ಡಿ ವಿನಾಯಿತಿ ನೀಡಲು ಕೇಂದ್ರ ಸರ್ಕಾರ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ ಒಪ್ಪಿಲ್ಲ. ದೇಶವನ್ನು ಲಾಕ್ಡೌನ್ ಮಾಡಿದ ಕೇಂದ್ರ ಸರ್ಕಾರವೇ ಪರಿಹಾರ ಕೊಡಬೇಕೆಂದು ಸುಪ್ರೀಂಕೋರ್ಟ್ ತಿಳಿಸಿದ್ದು ಮುಂದೇನಾಗಲಿದೆ ಎನ್ನುವುದನ್ನು ಕಾದುನೋಡಬೇಕಿದೆ.