ಬೆಂಗಳೂರು: ಕಾವೇರಿ ನದಿಗೆ ಅಡ್ಡಲಾಗಿ ಮೇಕೆದಾಟು ಬಳಿ ಸಮತೋಲನ/ ಶೇಖರಣಾ ಜಲಾಶಯ ನಿರ್ಮಿಸಲು ರಾಜ್ಯ ಸರ್ಕಾರ ಬದ್ಧವಾಗಿದ್ದು, ಈ ಸಂಬಂಧ ಕೇಂದ್ರ ಸರ್ಕಾರದ ಜತೆ ತ್ವರಿತವಾಗಿ ಮಾತುಕತೆ ನಡೆಸಲಾಗುವುದು ಎಂದು ರಾಮನಗರ ಜಿಲ್ಲಾ ಉಸ್ತುವಾರಿ ಸಚಿವರಾದ ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ.
ಮೇಕೆದಾಟು ಯೋಜನೆ ಜಾರಿ ಸಂಬಂಧ ಎದುರಾಗಿರುವ ಸಮಸ್ಯೆಗಳ ಕುರಿತು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳ ಜತೆ ಬುಧವಾರ ಸಭೆ ನಡೆಸಿದ ನಂತರ ಅವರು ಸುದ್ದಿಗಾರರ ಜತೆ ಮಾತನಾಡಿದರು.
ಮುಂದಿನ ದಿನಗಳಲ್ಲಿ ಬೆಂಗಳೂರು ನಗರಕ್ಕೆ ಕುಡಿಯುವ ನೀರಿನ ಕೊರತೆ ಎದುರಾಗಬಾರದು ಎನ್ನುವ ಪ್ರಮುಖ ಉದ್ದೇಶವೂ ಈ ಯೋಜನೆ ಹಿಂದೆ ಇದೆ. ಈ ವಿಷಯವನ್ನು ಕೇಂದ್ರ ಜಲಶಕ್ತಿ ಸಚಿವಾಲಯ ಮತ್ತು ಕೇಂದ್ರ ಜಲ ಆಯೋಗಕ್ಕೂ ಮನವರಿಕೆ ಮಾಡಿಕೊಡಲಾಗುವುದು. ಈ ನಿಟ್ಟಿನಲ್ಲಿ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಅವರು ಈಗಾಗಲೇ ಎರಡು ಬಾರಿ ಕೇಂದ್ರ ಸಚಿವರ ಜತೆಗೂ ಮಾತುಕತೆ ನಡೆಸಿದ್ದು, ಆದಷ್ಟು ಬೇಗ ಒಪ್ಪಿಗೆ ಸಿಗುವ ವಿಶ್ವಾಸ ಇದೆ ಎಂದು ಹೇಳಿದ್ದಾರೆ.
ಸಮಗ್ರ ಯೋಜನಾ ವರದಿಯ ಪರಿಶೀಲನೆ ಕೇಂದ್ರ ಜಲ ಆಯೋಗದ ಮುಂದೆ ಇದೆ. ಅದನ್ನು ತ್ವರಿತವಾಗಿ ಮಾಡಿ ಮುಗಿಸುವಂತೆಯೂ ಆಯೋಗವನ್ನು ಕೋರಲಾಗುವುದು. ಹಾಗೆಯೇ ಅರಣ್ಯ ಮತ್ತು ಪರಿಸರ ಸಚಿವಾಲಯದ ಒಪ್ಪಿಗೆ ಕೂಡ ಬೇಕಿದ್ದು ಎಲ್ಲವನ್ನೂ ತ್ವರಿತವಾಗಿ ಪಡೆಯಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದ್ದಾರೆ.
ಸುಪ್ರೀಂಕೋರ್ಟ್ ಆದೇಶದ ಪ್ರಕಾರ ತಮಿಳುನಾಡಿಗೆ ನೀರು ಬಿಡುವುದಕ್ಕೂ ಇದು ಹೆಚ್ಚು ಅನುಕೂಲ. ಹಾಗೆಯೇ 400 ಮೆಗಾವಾಟ್ ವಿದ್ಯುತ್ ಉತ್ಪಾದಿಸಬಹುದು. ಒಟ್ಟಾರೆ ಈ ಯೋಜನೆಗೆ ಒಂಬತ್ತು ಸಾವಿರ ಕೋಟಿ ಖರ್ಚಾಗುವ ಅಂದಾಜು ಮಾಡಿದ್ದು, ಕಾವೇರಿ ಅಚ್ಚುಕಟ್ಟು ಪ್ರದೇಶದ ರಾಜ್ಯಗಳಿಗೂ ಹೆಚ್ಚು ಅನುಕೂಲ ಆಗಲಿದೆ ಎಂದು ಹೇಳಿದ್ದಾರೆ.
ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶ ಜಯಪ್ರಕಾಶ್ ಸೇರಿದಂತೆ ಇತರ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.