ಎಲ್ಲರಿಗೂ ಕೊರೊನಾ ಲಸಿಕೆ ನ್ಯಾಯಯುತ ವಿತರಣೆಯೇ ಒಂದು ದೊಡ್ಡ ಸವಾಲಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ ವಿಜ್ಞಾನಿ ಸೌಮ್ಯಾ ಸ್ವಾಮಿನಾಥನ್ ಹೇಳಿದ್ದಾರೆ.
ಶ್ರೀಮಂತ ರಾಷ್ಟ್ರಗಳಿಗೆ ಸೀಮಿತ ಪ್ರಮಾಣದಲ್ಲಿ ಕೋವಿಡ್-19 ಲಸಿಕೆಯನ್ನು ಸೀಮಿತಗೊಳಿಸದೇ, ನ್ಯಾಯಯುತವಾಗಿ ಎಲ್ಲರಿಗೂ ವಿತರಿಸುವುದು ದೊಡ್ಡ ಸವಾಲಾಗಿದೆ ಎಂದು ತಿಳಿಸಿದ್ದಾರೆ.
ಕೊರೊನಾ ಲಸಿಕೆಯ ಕುರಿತಾಗಿ ಮಾತನಾಡಿದ ಅವರು, 2021ರ ಆರಂಭದ ವೇಳೆಗೆ ನಾವು ಒಳ್ಳೆಯ ಬೆಳವಣಿಗೆ ನಿರೀಕ್ಷಿಸಬಹುದು. ಶ್ರೀಮಂತ ರಾಷ್ಟ್ರಗಳಿಗೆ ಮಾತ್ರ ಲಸಿಕೆ ಬಳಕೆಗೆ ಅವಕಾಶ ನೀಡದೆ ಪ್ರಪಂಚದಾದ್ಯಂತ ಎಲ್ಲರಿಗೂ ಲಸಿಕೆ ವಿತರಿಸಲು ಮತ್ತು ಹಂಚಿಕೆ ಮಾಡಬೇಕಾದ ದೊಡ್ಡ ಸವಾಲು ನಮ್ಮ ಮುಂದಿದೆ ಎಂದು ಹೇಳಿದ್ದಾರೆ.
ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಬೆಂಗಳೂರಿನಲ್ಲಿ ಆಯೋಜಿಸಿದ್ದ ಸಾರ್ವಜನಿಕ ನೀತಿ ಮತ್ತು ನಿರ್ವಹಣೆ ಕುರಿತ ಅಂತರರಾಷ್ಟ್ರೀಯ ವರ್ಚುಯಲ್ ಸಮ್ಮೇಳನದಲ್ಲಿ ಅವರು ಮಾತನಾಡಿ, ಭಾರತವು ಲಸಿಕೆ ವಿಚಾರದಲ್ಲಿ ಉತ್ತಮ ಸ್ಥಾನದಲ್ಲಿದೆ. ಇಲ್ಲಿ ಅನೇಕ ಕಂಪನಿಗಳು ಲಸಿಕೆ ಅಭಿವೃದ್ಧಿಗೆ ತಮ್ಮದೇ ಆದ ಮತ್ತು ಸಹಯೋಗದಲ್ಲಿ ಕೆಲಸ ಮಾಡುತ್ತಿವೆ. ಭಾರತ ಲಸಿಕೆ ಉತ್ಪಾದನೆಗಳ ಕೇಂದ್ರವಾಗಿದೆ. ಸಾರ್ವಜನಿಕ ಆರೋಗ್ಯ ವ್ಯವಸ್ಥೆಗಳನ್ನು ಬಲಪಡಿಸಲು ಒತ್ತು ನೀಡಬೇಕಿದ್ದು, ಕೊರೊನಾಗೆ ಲಸಿಕೆ ಒಂದೇ ಅಸ್ತ್ರವೆನ್ನುವುದು ಸೌಮ್ಯ ಸ್ವಾಮಿನಾಥನ್ ಅಭಿಪ್ರಾಯವಾಗಿದೆ.