ಬೆಂಗಳೂರು: ವ್ಯಕ್ತಿಗಳಿಬ್ಬರನ್ನು ಅಪಹರಿಸಿ 26.5 ಲಕ್ಷ ರೂಪಾಯಿ ದೋಚಿದ್ದ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಮತ್ತು ಸಂಘಟನೆಯೊಂದರ ಅಧ್ಯಕ್ಷನನ್ನು ಪಶ್ಚಿಮ ವಿಭಾಗದ ಪೊಲೀಸರು ಬಂಧಿಸಿದ್ದಾರೆ.
ಎಸ್.ಜೆ. ಪಾರ್ಕ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಜೀವನ್ ಕುಮಾರ್ ಮತ್ತು ಕರ್ನಾಟಕ ಮಾನವ ಹಕ್ಕುಗಳ ಜನ ಜಾಗೃತಿ ಸಮಿತಿ ಅಧ್ಯಕ್ಷ ಜ್ಞಾನಪ್ರಕಾಶ್ ಬಂಧಿತ ಆರೋಪಿಗಳು. ಜ್ಞಾನಪ್ರಕಾಶ್ ಅಣ್ಣನ ಮಗಳನ್ನೇ ಮದುವೆಯಾಗಿದ್ದ ಜೀವನ್ ಕುಮಾರ್ ಸಂಚು ರೂಪಿಸಿ ದರೋಡೆ ಮಾಡಿರುವುದು ವಿಚಾರಣೆ ವೇಳೆ ಗೊತ್ತಾಗಿದೆ.
ತುಮಕೂರು ಜಿಲ್ಲೆ ಗುಬ್ಬಿಯ ಮೋಹನ್ ಅಡಕೆ ಮತ್ತು ಕೊಬ್ಬರಿ ಬೆಳೆಗಾರರಿದ್ದು ಬೆಂಗಳೂರಿನ ಚಿಕ್ಕಪೇಟೆಯ ಕಂಬಾರ ಪೇಟೆಯಲ್ಲಿರುವ ವ್ಯಾಪಾರಿ ಭರತ್ ಅವರಿಗೆ ಬೆಳೆ ಮಾರಾಟ ಮಾಡಿದ್ದರು. ಅವರಿಂದ ಬರಬೇಕಿದ್ದ 26.5 ಲಕ್ಷ ರೂ. ತರುವಂತೆ ತಮ್ಮ ಸಿಬ್ಬಂದಿ ಶಿವಕುಮಾರಸ್ವಾಮಿ ಅವರನ್ನು ಕಳುಹಿಸಿದ್ದಾರೆ. ಮತ್ತೊಬ್ಬ ಸಿಬ್ಬಂದಿ ದರ್ಶನ್ ಜೊತೆಗೆ ಕಾರ್ ನಲ್ಲಿ ಚಿಕ್ಕಪೇಟೆಗೆ ಬಂದಿದ್ದ ಶಿವಕುಮಾರ್ ಭರತ್ ಅವರಿಂದ ಹಣ ಪಡೆದು ವಾಪಸಾಗುವ ಸಂದರ್ಭದಲ್ಲಿ ಮತ್ತೆ ಕರೆ ಮಾಡಿದ ಮೋಹನ್ ಇನ್ನೂ 2 ಲಕ್ಷ ರೂ. ಬರಬೇಕಿದ್ದು, ಅದನ್ನು ಕೂಡ ಪಡೆದು ತರುವಂತೆ ತಿಳಿಸಿದ್ದಾರೆ.
ಭರತ್ ಬಳಿ ಹಣ ಪಡೆಯಲು ವಾಪಸ್ ಹೊರಟಿದ್ದ ಶಿವಕುಮಾರ್ ಮತ್ತು ದರ್ಶನ್ ಅವರ ಮೇಲೆ ಹಲ್ಲೆ ಮಾಡಿದ ಜ್ಞಾನಪ್ರಕಾಶ್ ಮತ್ತು ಜೀವನ್ ಕುಮಾರ್ ಹಾಗೂ ಸಹಚರ ಕಿಶೋರ್ ಅಪಹರಿಸಿದ್ದಾರೆ. ಅವರಿಂದ ಹಣ ಪಡೆದು ಲಾಲ್ ಭಾಗ್ ರಸ್ತೆಯಲ್ಲಿ ಬಿಟ್ಟುಹೋಗಿದ್ದಾರೆ. ಸಿಟಿ ಮಾರ್ಕೆಟ್ ಠಾಣೆಗೆ ಶಿವಕುಮಾರ್ ದೂರು ನೀಡಿದ್ದು ಇದರ ಅನ್ವಯ ತನಿಖೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.