ದೇಶದಲ್ಲಿ ಕೊರೊನಾ ಮಹಾಮಾರಿ ಆರ್ಭಟಿಸುತ್ತಿದ್ದು, ಇದರ ಪರಿಣಾಮವಾಗಿ ಸಾರ್ವಜನಿಕರು ಆರ್ಥಿಕ ಹಾಗೂ ಮಾನಸಿಕವಾಗಿ ಕಂಗೆಟ್ಟಿದ್ದಾರೆ. ಕೊರೊನಾ ಅಬ್ಬರ ದಿನೇ ದಿನೇ ಹೆಚ್ಚಾಗತೊಡಗಿದ್ದು, ಇದು ಯಾವಾಗ ಕೊನೆಗೊಳ್ಳಲಿದೆಯೋ ಎಂಬ ಆತಂಕದಲ್ಲಿಯೇ ಜೀವನ ಕಳೆಯುವಂತಾಗಿದೆ. ಇದರ ಮಧ್ಯೆ ಸದ್ಯದಲ್ಲೇ ಸಾರ್ವಜನಿಕರಿಗೆ ಮತ್ತೊಂದು ಶಾಕಿಂಗ್ ಸುದ್ದಿ ಸಿಗುವ ಸಾಧ್ಯತೆ ಇದೆ.
ಹೌದು, ಈವರೆಗೆ ಪೈಪೋಟಿ ಮೇಲೆ ಅತ್ಯಂತ ಅಗ್ಗದ ದರದಲ್ಲಿ ಡೇಟಾ ಹಾಗೂ ಕರೆ ಸೌಲಭ್ಯ ನೀಡುತ್ತಿದ್ದ ಟೆಲಿಕಾಂ ಕಂಪನಿಗಳು ಈಗ ದರ ಏರಿಕೆ ಮಾಡುವತ್ತ ಚಿಂತನೆ ನಡೆಸಿವೆ. ಈ ವಿಚಾರವನ್ನು ಸ್ವತಃ ಭಾರ್ತಿ ಏರ್ಟೆಲ್ ಅಧ್ಯಕ್ಷ ಸುನೀಲ್ ಮಿತ್ತಲ್ ತಿಳಿಸಿದ್ದಾರೆ. ಪ್ರಸ್ತುತ ಭಾರತದಲ್ಲಿ ಮೊಬೈಲ್ ಬಳಕೆದಾರರು ಕನಿಷ್ಠ ದರದಲ್ಲಿ ಸೇವೆಯನ್ನು ಪಡೆದುಕೊಳ್ಳುತ್ತಿದ್ದಾರೆ. ಮುಂದಿನ ಒಂದೆರಡು ತಿಂಗಳಲ್ಲಿ ಇದು ದುಬಾರಿಯಾಗಿ ಪರಿಣಮಿಸಲಿದೆ.
ಕೊರೊನಾ ಕಾರಣಕ್ಕೆ ಬಹುತೇಕ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಮನೆಯಿಂದಲೇ ಕಾರ್ಯ ನಿರ್ವಹಿಸಲು ಅನುವು ಮಾಡಿಕೊಟ್ಟಿದ್ದು, ಜೊತೆಗೆ ಶಾಲಾ – ಕಾಲೇಜುಗಳ ವಿದ್ಯಾರ್ಥಿಗಳಿಗೆ ಆನ್ಲೈನ್ ಮೂಲಕ ಶಿಕ್ಷಣ ನೀಡಲಾಗುತ್ತಿದೆ. ಹೀಗಾಗಿ ಇದರ ಮಧ್ಯೆ ಮೊಬೈಲ್ ಕರೆ ಹಾಗೂ ಡೇಟಾ ದರ ಏರಿಕೆಯಾದರೆ ಸಹಜವಾಗಿಯೇ ಬಡ ಹಾಗೂ ಮಧ್ಯಮ ವರ್ಗದ ಜನತೆಗೆ ಕಷ್ಟಕರವಾಗಲಿದೆ. ಈಗಾಗಲೇ ಆರ್ಥಿಕವಾಗಿ ಕಂಗೆಟ್ಟಿರುವ ಸಾರ್ವಜನಿಕರಿಗೆ ಇದು ಮತ್ತೊಂದು ಹೊರೆಯಾಗುವ ಸಾಧ್ಯತೆ ಇದೆ.