ನವದೆಹಲಿ: ರಾಹುಲ್ ಗಾಂಧಿಯವರು ಕಾಂಗ್ರೆಸ್ ಅಧ್ಯಕ್ಷರಾಗಲು ನಿರಾಕರಿಸಿರುವ ಹಿನ್ನಲೆಯಲ್ಲಿ ಗಾಂಧಿ ಕುಟುಂಬದ ಹೊರತಾದವರನ್ನು ಎಐಸಿಸಿ ಅಧ್ಯಕ್ಷರನ್ನಾಗಿ ಮಾಡುವ ಸಾಧ್ಯತೆಯಿದೆ ಎನ್ನಲಾಗಿದೆ. ಹಿರಿಯ ನಾಯಕ ಎ.ಕೆ. ಆಂಟನಿಯವರನ್ನು ಮಧ್ಯಂತರ ಅಧ್ಯಕ್ಷರನ್ನಾಗಿ ಮಾಡುವ ಸಾಧ್ಯತೆಯಿದೆ ಎನ್ನಲಾಗಿದೆ.
ರಾಹುಲ್ ಗಾಂಧಿ ಅಧ್ಯಕ್ಷ ಸ್ಥಾನಕ್ಕೆ ಹಿಂದೇಟು ಹಾಕುತ್ತಿರುವುದರಿಂದ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರು ಮಧ್ಯಂತರ ಅಧ್ಯಕ್ಷರನ್ನಾಗಿ ಎ.ಕೆ. ಆಂಟನಿಯವರನ್ನು ನೇಮಕ ಮಾಡಬಹುದು ಎಂದು ಸಲಹೆ ನೀಡಿದ್ದಾರೆ. ಅಲ್ಲದೇ ಕೊರೊನಾ ಬಳಿಕ ರಾಹುಲ್ ಗಾಂಧಿಯವರನ್ನೇ ನೇಮಕ ಮಾಡಬೇಕು ಎಂಬ ವಿಚಾರ ತಿಳಿಸಿದ್ದಾರೆ ಎನ್ನಲಾಗಿದೆ.
ಕಾಂಗ್ರೆಸ್ ನ ಒಂದು ಬಣ ಗಾಂಧಿ ಕುಟುಂಬದವರೇ ಕಾಂಗ್ರೆಸ್ ಅಧ್ಯಕ್ಷರಾಗಬೇಕು ಎಂದು ಅಭಿಪ್ರಾಯಪಟ್ಟರೆ ಇನ್ನೊಂದು ಬಣ ಗಾಂಧಿ ಕುಟುಂಬದ ಹೊರತಾದವರು ಅಧ್ಯಕ್ಷರಾಗಲಿ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಒಟ್ಟಾರೆ ಇಂದು ನಡೆಯಲಿರುವ ಸಿಡಬ್ಲ್ಯೂಸಿ ಸಭೆಯಲ್ಲಿ ಈ ಬಗ್ಗೆ ಮಹತ್ವದ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ.