ನವದೆಹಲಿ: ಕಾಂಗ್ರೆಸ್ ಅಧ್ಯಕ್ಷರ ಬದಲಾವಣೆ ಮಾಡಬೇಕೆಂಬುದರ ಕುರಿತಾಗಿ ಭಾರೀ ಚರ್ಚೆ ನಡೆದಿದ್ದು, ಸೋನಿಯಾ ಗಾಂಧಿ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆ ದಟ್ಟವಾಗಿದೆ.
ರಾಹುಲ್ ಗಾಂಧಿ ಕೂಡ ಹುದ್ದೆ ಒಪ್ಪದ ಕಾರಣ ಪ್ರಿಯಾಂಕಾ ಅವರು ಅಧ್ಯಕ್ಷರಾಗಲಿ ಎಂಬ ಸಲಹೆ ಕೇಳಿ ಬಂದಿದೆ. ಬಹುತೇಕರು ಗಾಂಧಿ ಕುಟುಂಬದ ನಾಯಕತ್ವ ಇರಲಿ ಎಂದು ಹೇಳಿದ್ದು, ಇನ್ನೂ ಅನೇಕ ಹಿರಿಯರು ನಾಯಕತ್ವ ಸೇರಿ ಕಾಂಗ್ರೆಸ್ ಪಕ್ಷದಲ್ಲಿ ಆಮೂಲಾಗ್ರ ಬದಲಾವಣೆಗೆ ಒತ್ತಡ ಹೇರಿದ್ದಾರೆ.
ಪಕ್ಷದ ನಿರ್ಧಾರ, ಪ್ರಮುಖ ಸ್ಥಾನಗಳ ನೇಮಕದಲ್ಲಿ ಹಿರಿಯ ನಾಯಕರನ್ನು ಪರಿಗಣಿಸಲಾಗಿಲ್ಲ. ಸೋನಿಯಾ, ರಾಹುಲ್, ಪ್ರಿಯಾಂಕಾ ಗಾಂಧಿ ಅವರೊಂದಿಗೆ ನೇರ ಭೇಟಿಗೆ ಅವಕಾಶ ಸಿಗುತ್ತಿಲ್ಲ. ವೇಣುಗೋಪಾಲ್ ಮತ್ತು ಸುರ್ಜೆವಾಲಾ ಅವರಿಗೆ ಮಾತ್ರ ಗಾಂಧಿ ಕುಟುಂಬದ ನಾಯಕರ ಭೇಟಿಗೆ ಅವಕಾಶ ನೀಡಲಾಗಿದೆ.
ಲೋಕಸಭೆ ಚುನಾವಣೆಯ ಸೋಲಿನ ನಂತರ ಪಕ್ಷ ಸಂಘಟನೆ ಆಗುತ್ತಿಲ್ಲ. ಸಮರ್ಥ ವಿರೋಧ ಪಕ್ಷವಾಗಿ ವರ್ತಿಸಲು ಕಾಂಗ್ರೆಸ್ ಸಂಪೂರ್ಣ ವಿಫಲವಾಗಿದೆ. ಅಲ್ಲದೆ ಗಾಲ್ವಾನ್ ಗಡಿ ಸಂಘರ್ಷದ ಕುರಿತು ಏಕಪಕ್ಷೀಯ ನಿರ್ಧಾರಕ್ಕೆ ಅಸಮಾಧಾನ ವ್ಯಕ್ತವಾಗಿದೆ.
ರಾಹುಲ್ ಗಾಂಧಿ ಸುತ್ತುವರೆದಿರುವ ಟೀಂ ಕುರಿತು, ಪಕ್ಷದ ಹಿರಿಯ ನಾಯಕರನ್ನು ಕಡೆಗಣಿಸುವ ಕುರಿತು ಹಲವರು ಬೇಸರ ವ್ಯಕ್ತಪಡಿಸಿದ್ದಾರೆ. ಸಿಡಬ್ಲ್ಯುಸಿ ಸಭೆ ಬಳಿಕ ಮುಂದಿನ ನಡೆಗಳ ಕುರಿತು ಚರ್ಚೆ ನಡೆಸಲಾಗುವುದು ಎಂದು ಹೇಳಲಾಗಿದೆ.