ನವದೆಹಲಿ: ವಾಹನಗಳ ವಿಮೆ ನವೀಕರಿಸುವ ಸಂದರ್ಭದಲ್ಲಿ ನಿಗದಿಪಡಿಸಲಾದ ಮಾಲಿನ್ಯ ನಿಯಂತ್ರಣ ಮಾನದಂಡಗಳನ್ನು ಪರಿಶೀಲಿಸುವಂತೆ ವಿಮೆ ನಿಯಂತ್ರಕ ಪ್ರಾಧಿಕಾರ(IRDAI) ವಿಮೆ ಕಂಪನಿಗಳಿಗೆ ಸೂಚನೆ ನೀಡಿದೆ.
ವಾಹನದಿಂದ ಹೊಗೆ ಹೊರಸೂಸುವಿಕೆಯ ಕುರಿತಾಗಿ ಎಲ್ಲಾ ರೀತಿಯ ಮೋಟಾರು ವಾಹನಗಳಿಗೆ ನಿಗದಿಪಡಿಸಿದ ಮಾಲಿನ್ಯನಿಯಂತ್ರಣ ಮಾನದಂಡಗಳ ಹೊಗೆ ತಪಾಸಣೆ ಪ್ರಮಾಣಪತ್ರವನ್ನು ವಿಮೆ ಪಾಲಿಸಿ ಸಂದರ್ಭದಲ್ಲಿ ಕೇಳುವಂತೆ ವಿಮೆ ಕಂಪನಿಗಳಿಗೆ ತಿಳಿಸಲಾಗಿದೆ.
ಆಗಸ್ಟ್ 20 ರಂದು ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ(IRDAI) ಸುತ್ತೋಲೆ ಹೊರಡಿಸಿದ್ದು, ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ವಾಹನಗಳ ಹೊಗೆಯಿಂದ ಉಂಟಾಗುವ ಮಾಲಿನ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ದೆಹಲಿ ಪರಿಸರದಲ್ಲಿ ವರ್ಷದಿಂದ ವರ್ಷಕ್ಕೆ ವಾಯು ಮಾಲಿನ್ಯ ಹೆಚ್ಚಾಗುತ್ತಿದ್ದು, ಇದು ಅಪಾಯಕಾರಿ ಮಟ್ಟದಲ್ಲಿದೆ. ಲಕ್ಷಾಂತರ ಜನರ ಮೇಲೆ ಅಪಾಯಕಾರಿ ವಿಷ ಪರಿಣಾಮ ಬೀರುತ್ತಿದ್ದು ಇದಕ್ಕೆ ಕಡಿವಾಣ ಹಾಕುವ ಭಾಗವಾಗಿ ಮೋಟಾರು ವಿಮೆ ಸಂದರ್ಭದಲ್ಲಿ PUC(PUC or pollution under control certificates) ಪ್ರಮಾಣ ಪತ್ರ ಪಡೆಯಬೇಕು ಎಂದು ತಿಳಿಸಲಾಗಿದೆ.
ವಾಹನಗಳಿಂದ ಹೊಗೆ ಹೊರಸೂಸುವಿಕೆಯ ಮಾಲಿನ್ಯನಿಯಂತ್ರಣ ಮಾನದಂಡಗಳನ್ನು ಪಿಯುಸಿ ಪ್ರಮಾಣಪತ್ರ ಒಳಗೊಂಡಿದ್ದು ಅದನ್ನು ಪರಿಶೀಲಿಸಬೇಕು. ಎಲ್ಲಾ ರೀತಿಯ ಮೋಟಾರು ವಾಹನಗಳಿಗೆ ಹೊಗೆ ಹೊರಸೂಸುವಿಕೆಯ ಮಟ್ಟವನ್ನು ನಿಗದಿಪಡಿಸಲಾಗಿದ್ದು ಈ ಬಗ್ಗೆ ಪರಿಶೀಲನೆ ನಡೆಸಬೇಕೆಂದು ವಿಮಾ ಕಂಪನಿಗಳಿಗೆ ಸೂಚನೆ ನೀಡಲಾಗಿದೆ