ಕೊಟ್ಟಾಯಂ: ಕೇರಳದ ಎಲೆಕ್ಟ್ರಾನಿಕ್ಸ್ ಮಳಿಗೆಯೊಂದರ ಜಾಹೀರಾತು ವಿವಾದಕ್ಕೆ ಕಾರಣವಾಗಿದೆ. ನಮ್ಮ ಮಳಿಗೆಯಲ್ಲಿ ಶಾಪಿಂಗ್ ಮಾಡಿದ 24 ಗಂಟೆಯೊಳಗೆ ಕೋವಿಡ್ ಪರೀಕ್ಷೆ ನಡೆಸಿ ಪಾಸಿಟಿವ್ ವರದಿ ಬಂದಲ್ಲಿ ಜಿಎಸ್ಟಿ ರಹಿತವಾಗಿ 50 ಸಾವಿರ ರೂ. ನೀಡಲಾಗುವುದು ಎಂದು ಎಲೆಕ್ಟ್ರಾನಿಕ್ಸ್ ಶಾಪಿಂಗ್ ಮಳಿಗೆ ಜಾಹೀರಾತು ನೀಡಿದೆ.
ಇದರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಆಗಸ್ಟ್ 15 ರಿಂದ 30 ರವರೆಗೆ ನಮ್ಮಲ್ಲಿ ಶಾಪಿಂಗ್ ಮಾಡಿದ 24 ಗಂಟೆಯೊಳಗೆ ಕೊರೊನಾ ಪರೀಕ್ಷೆ ನಡೆಸಬೇಕು.
ಪಾಸಿಟಿವ್ ಬಂದವರಿಗೆ 50 ಸಾವಿರ ರೂ. ನೀಡಲಾಗುವುದು ಎಂದು ಹೇಳಲಾಗಿತ್ತು. ಸಾಮಾಜಿಕ ಹೊಣೆಗಾರಿಕೆ ಮರೆತು, ಬೇಜವಾಬ್ದಾರಿಯಿಂದ ಕೊರೊನಾ ಹರಡಲು ಎಲೆಕ್ಟ್ರಾನಿಕ್ಸ್ ಮಳಿಗೆ ಮಾಲೀಕರು ಮುಂದಾಗಿದ್ದಾರೆ ಎಂದು ಆಕ್ರೋಶ ವ್ಯಕ್ತವಾಗಿದೆ. ಕೊಟ್ಟಾಯಂ ಮುನ್ಸಿಪಾಲಿಟಿ ಕೌನ್ಸಿಲರ್ ಈ ಕುರಿತಾಗಿ ಸಿಎಂ ಪಿಣರಾಯಿ ವಿಜಯನ್ ಅವರಿಗೆ ದೂರು ನೀಡಿದ್ದಾರೆ. ಶಾಪಿಂಗ್ ಮಾಲ್ ಬಂದ್ ಮಾಡಿ ತನಿಖೆ ನಡೆಸಲು ಈಗ ಆದೇಶಿಸಲಾಗಿದೆ.