ಬೆಂಗಳೂರು: ಕೊರೋನಾ ಸಂಕಷ್ಟಕ್ಕೆ ಸಿಲುಕಿದ ಬೀದಿ ವ್ಯಾಪಾರಿಗಳ ನೆರವಿಗೆ ರಾಜ್ಯ ಸರ್ಕಾರ ಮುಂದಾಗಿದ್ದು ರಾಷ್ಟ್ರೀಯ ನಗರ ಜೀವನೋಪಾಯ ಇಲಾಖೆ ವತಿಯಿಂದ ಆರ್ಥಿಕ ನೆರವು ಕೊಡಿಸಲು ಕ್ರಮ ಕೈಗೊಂಡಿದೆ.
ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಖಾತೆ ಸಚಿವ ಹರದೀಪ್ ಸಿಂಗ್ ಪುರಿ ಅವರೊಂದಿಗೆ ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥ್ ನಾರಾಯಣ್ ವಿಡಿಯೋ ಸಂವಾದದಲ್ಲಿ ಭಾಗವಹಿಸಿ ನೆರವು ಕೋರಿದ್ದಾರೆ.
ಲಾಕ್ಡೌನ್ ನಿಂದ ಬೀದಿ ವ್ಯಾಪಾರಿಗಳು ಸಂಕಷ್ಟಕ್ಕೆ ಸಿಲುಕಿದ್ದು ಅವರಿಗೆ ರಾಜ್ಯ ಸರ್ಕಾರ ಸ್ವಲ್ಪಮಟ್ಟಿಗಿನ ನೆರವು ನೀಡಿದೆ. ಬ್ಯಾಂಕುಗಳಿಂದ ವಾರ್ಷಿಕ ಶೇಕಡ 7 ರಷ್ಟು ಬಡ್ಡಿದರದಲ್ಲಿ 10 ಸಾವಿರ ರೂಪಾಯಿ ಸಾಲ ಕೊಡಿಸಬೇಕೆಂದು ಅವರು ಕೇಂದ್ರ ಸಚಿವರಿಗೆ ಮನವಿ ಮಾಡಿದ್ದಾರೆ.
1,13,403 ಬೀದಿ ವ್ಯಾಪಾರಿಗಳನ್ನು ಗುರುತಿಸಿ 68,325 ಅರ್ಜಿಗಳಿಗೆ ಕೇಂದ್ರ ಸರ್ಕಾರ ಸಾಲ ನೀಡಲು ಒಪ್ಪಿಗೆ ಸೂಚಿಸಿದೆ. ಈ ಪೈಕಿ ಬ್ಯಾಂಕುಗಳು 10,920 ಸಾಲದ ಅರ್ಜಿಗಳನ್ನು ಮಾತ್ರ ಸ್ವೀಕರಿಸಿದ್ದು ಕೇವಲ 571 ಮಂದಿಗೆ ಮಾತ್ರ ಸಾಲ ನೀಡಿವೆ ಎಂದು ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯೆ ನೀಡಿದ ಕೇಂದ್ರ ಸಚಿವ ಹರದೀಪ್ ಸಿಂಗ್ ಪುರಿ ಬ್ಯಾಂಕರುಗಳ ಸಭೆ ನಡೆಸಿ ಅರ್ಜಿಗಳ ವಿಲೇವಾರಿಗೆ ಸೂಚನೆ ನೀಡಿದ್ದು ಬೀದಿ ವ್ಯಾಪಾರಿಗಳಿಗೆ ಅಗತ್ಯವಾದ ಸಾಲದ ನೆರವು ನೀಡದಿದ್ದರೆ ಬ್ಯಾಂಕುಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.