ದಾವಣಗೆರೆ: ರೈತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ರೈತರಿಂದಲೇ ಬೆಳೆ ಸಮೀಕ್ಷೆ ನಡೆಸುವ ಆಪ್ ಬಿಡುಗಡೆ ಮಾಡಲಾಗಿದೆ. ರೈತರು ಈ ಬೆಳೆ ಸಮೀಕ್ಷೆ ಉತ್ಸವವನ್ನು ಒಂದು ರೀತಿ ಹಬ್ಬದ ರೀತಿಯಲ್ಲಿ ಆಚರಿಸಿ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿದ್ದಾರೆ.
ಮಂಗಳವಾರ ಚನ್ನಗಿರಿ ತಾಲೂಕಿನ ಕತ್ತಲಗೆರೆ ಗ್ರಾಮದಲ್ಲಿ ರೈತರ ಬೆಳೆ ಸಮೀಕ್ಷೆ ಮೊಬೈಲ್ ಆಪ್ ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಬಳಿಕ ಸುದ್ದಿಗಾರರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ರೈತರಿಗೆ ತಮ್ಮ ಬೆಳೆ ಕುರಿತು ಸಮೀಕ್ಷೆ ನಡೆಸುವ ಸ್ವಾತಂತ್ರ್ಯವನ್ನು ಯಾವತ್ತೂ ಕೊಟ್ಟಿರಲಿಲ್ಲ. ಬೆಳೆ ಸಮೀಕ್ಷೆ ಮೂಲಕ ರೈತರಿಗೆ ವಿಶೇಷ ಸ್ವಾತಂತ್ರ್ಯ ಲಭಿಸಿದೆ ಎಂದು ತಿಳಿಸಿದ್ದಾರೆ.
ಸಿಎಂ ಯಡಿಯೂರಪ್ಪ ಕೊರೊನಾ ಸಂಕಷ್ಟದ ಹಿನ್ನೆಲೆಯಲ್ಲಿ ಮೆಕ್ಕೆಜೋಳ ಬೆಳೆದ ಸುಮಾರು 10 ಲಕ್ಷ ರೈತರಿಗೆ 500 ಕೋಟಿ ರೂ. ಪರಿಹಾರ ಘೋಷಿಸಿದ್ದು ಕಳೆದ ವರ್ಷದ ಬೆಳೆ ಸಮೀಕ್ಷೆ ಆಧಾರದ ಮೇಲೆಯೇ. ಈಗಾಗಲೇ 8 ಲಕ್ಷ ರೈತರಿಗೆ ಹಣವನ್ನು ಅವರ ಖಾತೆಗೆ ಜಮೆ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಆಗಸ್ಟ್ 16 ರಂದು ಸಿಎಂ ಕಿಸಾನ್ ಸಮ್ಮಾನ್ ಯೋಜನೆಯಡಿ 1000 ಕೋಟಿ ರೂ. ರಾಜ್ಯದ 50 ಲಕ್ಷ ರೈತರಿಗೆ ಬಿಡುಗಡೆ ಮಾಡಿದ್ದಾರೆ. ಈಗಾಗಲೇ ರೈತರ ಅಕೌಂಟ್ಗೆ ಹಣ ಜಮೆ ಮಾಡಲಾಗುತ್ತಿದೆ. ಅದರಂತೆ ಕಳೆದ 19-20ನೇ ಸಾಲಿನ ಹಿಂಗಾರು ಮುಂಗಾರು ಬೆಳೆ ವಿಮೆಯನ್ನು ಇಂದಿನಿಂದ ಬಿಡುಗಡೆ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಯೂರಿಯಾ ಬಳಕೆ ಕಡಿಮೆ ಮಾಡಿ:
ಯೂರಿಯಾ ಗೊಬ್ಬರ ಕೊರತೆ ಕಂಡುಬಂದಿದೆ ಎಂದು ಹೇಳಲಾಗುತ್ತಿದೆ. ಬೇಡಿಕೆಗನುಗುಣವಾಗಿ ಯೂರಿಯಾ ಸರಬರಾಜಾಗುತ್ತಿದ್ದು, ಸದ್ಯ ರಾಜ್ಯಕ್ಕೆ 27 ಸಾವಿರ ಟನ್ ಬಂದಿದೆ. ಬೇಡಿಕೆಯ ಗೊಬ್ಬರವನ್ನು ಮಲೆನಾಡು ಪ್ರದೇಶಗಳಲ್ಲಿ ಮೊದಲನೇ ಹಂತದಲ್ಲಿ ಬಿಡುಗಡೆ ಮಾಡಲಾಗುವುದು. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದಲ್ಲಿ ಈಗಾಗಲೇ ನಾವು 67 ಸಾವಿರ ಮೆಟ್ರಿಕ್ ಟನ್ ಹೆಚ್ಚು ಗೊಬ್ಬರ ನೀಡಿದ್ದೇವೆ. ರೈತರು ಎಷ್ಟು ಗೊಬ್ಬರ ಬೇಕೋ ಅಷ್ಟೇ ಬಳಕೆ ಮಾಡಬೇಕು. ಬೆಳೆಗಾಗಿ ಹೆಚ್ಚು ಗೊಬ್ಬರ ಬಳಕೆ ಮಾಡುವುದುನ್ನು ನಿಲ್ಲಿಸಬೇಕು. ಹೆಚ್ಚು ಬಳಕೆ ಮಾಡಿದಷ್ಟು ಭೂತಾಯಿಗೆ ವಿಷ ಉಣಿಸಿದಂತಾಗುತ್ತದೆ ಎಂದು ಹೇಳಿದ್ದಾರೆ.
ಕೃಷಿಯಲ್ಲಿ ರೈತರು ಆರ್ಥಿಕ ಸ್ವಾವಲಂಬನೆ ಹೊಂದಬೇಕು. ಕೃಷಿಯನ್ನು ಲಾಭದಾಯಕವಾಗಿ ಬಳಸಿಕೊಳ್ಳಬೇಕು. ಆ ಮೂಲಕ ತಾವು ಬೆಳೆದ ಬೆಳೆಗೆ ತಾವೇ ಬೆಲೆ ನಿಗದಿ ಮಾಡುವಂತಹ ಸಮಯ ಸದ್ಯದಲ್ಲಿಯೇ ಬರಲಿದೆ ಎಂದು ತಿಳಿಸಿದ್ದಾರೆ.