ನವದೆಹಲಿ: ಗೃಹ ಸಾಲ ಪಡೆದ ಗ್ರಾಹಕರ ನೆರವಿಗೆ ಬ್ಯಾಂಕುಗಳು ಮುಂದಾಗಿವೆ. ಕೊರೊನಾ ಸಂಕಷ್ಟದಲ್ಲಿರುವ ಗ್ರಾಹಕರಿಗೆ ಅನುಕೂಲ ಕಲ್ಪಿಸಲು ಬ್ಯಾಂಕುಗಳು ಮುಂದಾಗಿದ್ದು ಇಎಂಐ ಮೊತ್ತ ಇಳಿಕೆ ಮಾಡುವ ಸಂಭವವಿದೆ.
ಕೆಲವು ವರ್ಷ ಗೃಹಸಾಲದ ಮೊತ್ತ ಕಡಿತಗೊಳಿಸುವುದು, ಇನ್ನಷ್ಟು ತಿಂಗಳ ಕಾಲ ಇಎಂಐ ಪಾವತಿಸಲು ವಿನಾಯಿತಿ ನೀಡುವುದು, ಸಾಲದ ಅವಧಿಯನ್ನು ಎರಡು ವರ್ಷ ವಿಸ್ತರಿಸುವುದು ಸೇರಿದಂತೆ ಹಲವು ವಿನಾಯಿತಿ ನೀಡಲು ಭಾರತೀಯ ಸ್ಟೇಟ್ ಬ್ಯಾಂಕ್ ಸೇರಿದಂತೆ ಪ್ರಮುಖ ಬ್ಯಾಂಕುಗಳು ಪರಿಶೀಲನೆ ನಡೆಸಿವೆ ಎನ್ನಲಾಗಿದೆ.
ಕೊರೊನಾ ಬಿಕ್ಕಟ್ಟಿನಿಂದ ವೇತನ ಕಡಿತ, ಆದಾಯ ಕಡಿತ, ಉದ್ಯೋಗ ನಷ್ಟ ಮೊದಲಾದ ತೊಂದರೆಗೆ ಗ್ರಾಹಕರು ಸಿಲುಕಿರುವುದರಿಂದ ಎರಡು ವರ್ಷಗಳವರೆಗೆ ಇಎಂಐ ಪಾವತಿಯಿಂದ ವಿನಾಯಿತಿ ನೀಡಲು ಬ್ಯಾಂಕುಗಳಿಗೆ ಭಾರತೀಯ ರಿಸರ್ವ್ ಬ್ಯಾಂಕ್ ಅವಕಾಶ ಕಲ್ಪಿಸಿದೆ. ಈಗಾಗಲೇ ಆರು ತಿಂಗಳ ಕಾಲಾವಕಾಶ ನೀಡಲಾಗಿದ್ದು, ಇನ್ನಷ್ಟು ತಿಂಗಳು ವಿನಾಯಿತಿ ನೀಡಲು ಬ್ಯಾಂಕುಗಳು ಪರಿಶೀಲನೆ ನಡೆಸಿವೆ ಎಂದು ಹೇಳಲಾಗಿದೆ. ಇಎಂಐ ಪಾವತಿ ವಿಸ್ತರಣೆಯಾದರೆ ಗ್ರಾಹಕರು ಶೇಕಡ 0.3 ರಷ್ಟು ಹೆಚ್ಚು ಬಡ್ಡಿದರ ಪಾವತಿಸಬೇಕಾಗಬಹುದು ಎಂದು ಹೇಳಲಾಗಿದೆ.