ಆಗಸ್ಟ್ 15 ರ ಸ್ವಾತಂತ್ರ್ಯ ದಿನಾಚರಣೆಯಂದು ಅಂತರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತಿ ಘೋಷಿಸಿದ ಮಹೇಂದ್ರ ಸಿಂಗ್ ಧೋನಿ ಮತ್ತು ಸುರೇಶ್ ರೈನಾ, ಅದರ ಹಿಂದಿನ ಕತೆಯನ್ನು ಬಿಚ್ಚಿಟ್ಟಿದ್ದಾರೆ.
ಧೋನಿ ನಿವೃತ್ತಿ ಘೋಷಿಸುವುದು ಮೊದಲೇ ಗೊತ್ತಿತ್ತು. ನಾನು, ಧೋನಿ, ಪಿಯೂಷ್ ಚಾವ್ಲಾ, ದೀಪಕ್ ಚಹರ್, ಕರಣ್ ಶರ್ಮ ಆ.14 ರಂದು ಒಟ್ಟಿಗೆ ಚೆನ್ನೈಗೆ ಬಂದಿಳಿದೆವು. ಆಗಲೇ ನಿವೃತ್ತಿಯ ನಿರ್ಧಾರ ಮಾಡಿ ಆಗಿತ್ತು.
ಮಹಿ ಭಾಯ್ ಜೆರ್ಸಿ ಸಂಖ್ಯೆ 7, ನನ್ನದು 3. ಎರಡೂ ಸಂಖ್ಯೆಗಳನ್ನು ಅಕ್ಕ-ಪಕ್ಕ ಹಾಕಿದರೆ, 73 ಆಗುತ್ತದೆ. ಆಗಸ್ಟ್ 15 ಕ್ಕೆ ಭಾರತ ಸ್ವಾತಂತ್ರ್ಯಗೊಂಡು 73 ನೇ ವರ್ಷದಿಂದ 74 ನೇ ವರ್ಷಕ್ಕೆ ಕಾಲಿಡುತ್ತದೆ. ನಮ್ಮ ನಿವೃತ್ತಿ ಘೋಷಿಸಲು ಇದಕ್ಕಿಂತ ಪ್ರಶಸ್ತ ದಿನ ಮತ್ತೊಂದಿಲ್ಲ ಎಂದುಕೊಂಡೇ ಆ.15 ರ ಸ್ವಾತಂತ್ರ್ಯ ದಿನಾಚರಣೆಯಂದೇ ಕ್ರಿಕೆಟ್ ಗೆ ವಿದಾಯ ಹೇಳಿದೆವು ಎಂದಿದ್ದಾರೆ.
ದೈನಿಕ್ ಜಾಗರಣ್ ಗೆ ನೀಡಿರುವ ಸಂದರ್ಶನದಲ್ಲಿ ಈ ವಿಷಯ ಬಹಿರಂಗಪಡಿಸಿರುವ ರೈನಾ, ಆ ದಿನ ರಾತ್ರಿ ಎಲ್ಲರೂ ಸೇರಿ ಪಾರ್ಟಿ ಮಾಡಿದೆವು. ಒಬ್ಬರನ್ನೊಬ್ಬರು ತಬ್ಬಿ ಅತ್ತೆವು. ಭವಿಷ್ಯದ ಜೀವನ ಹಾಗೂ ನಮ್ಮ ಸ್ನೇಹಮಯ ಜೀವನದ ಬಗ್ಗೆ ಗಂಟೆಗಟ್ಟಲೆ ಚರ್ಚಿಸಿದೆವು ಎಂದು ಭಾವುಕರಾಗಿ ಹೇಳಿದ್ದಾರೆ.