ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಓಣಂ ಹಬ್ಬದ ಪ್ರಯುಕ್ತ ಕೇರಳ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ರಾಜ್ಯಕ್ಕೆ ವಿಶೇಷ ಸಾರಿಗೆಗಳನ್ನು ಆಗಸ್ಟ್ 24 ರಿಂದ ಸೆಪ್ಟೆಂಬರ್ 6 ರವರೆಗೆ ಬೆಂಗಳೂರು ಮತ್ತು ಮೈಸೂರಿನಿಂದ ಕೇರಳ ರಾಜ್ಯದ ವಿವಿಧ ಸ್ಥಳಗಳಿಗೆ ಕಾರ್ಯಾಚರಣೆ ಮಾಡಲಾಗುವುದು.
ಬೆಂಗಳೂರಿನಿಂದ ಕಣ್ಣೂರು, ಎರ್ನಾಕುಲಂ, ಕಾಸರಗೋಡು, ಕೊಟ್ಟಾಯಂ, ಕಲ್ಲಿಕೋಟೆ, ಪಾಲಘಾಟ್, ತ್ರಿಶೂರು, ತಿರುವನಂತಪುರಂಗಳಿಗೆ ಮತ್ತು ಈ ಸ್ಥಳಗಳಿಂದ ಬೆಂಗಳೂರಿಗೆ ಬಸ್ ಸಂಚರಿಸಲಿವೆ. ಮೈಸೂರಿನಿಂದ ತಿರುವನಂತಪುರಂ, ಎರ್ನಾಕುಲಂ, ಕೊಟ್ಟಾಯಂಗಳಿಗೆ ಮತ್ತು ಈ ಸ್ಥಳಗಳಿಂದ ಮೈಸೂರಿಗೆ ಬಸ್ ಗಳು ಕಾರ್ಯಚರಣೆ ನಡೆಸಲಿವೆ.
ಕರ್ನಾಟಕದಿಂದ ಕೇರಳಕ್ಕೆ ಹೋಗುವ ಪ್ರಯಾಣಿಕರು ಕೇರಳ ಸರ್ಕಾರದ ಸೇವಾಸಿಂಧು https://covid19jagratha.Kerala.nic.in ಪೋರ್ಟಲ್ ನಲ್ಲಿ ಕಡ್ಡಾಯವಾಗಿ ನೊಂದಾಯಿಸಿಕೊಳ್ಳಬೇಕು. ಬಸ್ ಹತ್ತುವ ಮೊದಲು ಪೋರ್ಟಲ್ ನಲ್ಲಿ ನೋಂದಾಯಿಸಿಕೊಂಡ ಬಗ್ಗೆ ಪುರಾವೆಯನ್ನು ರಾಜ್ಯ ರಸ್ತೆ ಸಾರಿಗೆ ನಿಗಮದ ಸಿಬ್ಬಂದಿಗೆ ತೋರಿಸಬೇಕು. ಇಲ್ಲದಿದ್ದಲ್ಲಿ ಬಸ್ ನಲ್ಲಿ ಪ್ರಯಾಣಿಸಲು ನಿರಾಕರಿಸಲಾಗುವುದು.
ಕೇರಳದಿಂದ ಕರ್ನಾಟಕಕ್ಕೆ ಬರುವ ಪ್ರಯಾಣಿಕರು ಇತರೆ ರಾಜ್ಯದಿಂದ ಕರ್ನಾಟಕ ರಾಜ್ಯದೊಳಗೆ ಆಗಮಿಸಲು ಕರ್ನಾಟಕ ಸರ್ಕಾರದ https://sevasindhu.karnataka.gov.in ಸೇವಾಸಿಂಧು ಪೋರ್ಟಲ್ ನಲ್ಲಿ ಕಡ್ಡಾಯವಾಗಿ ನೊಂದಾಯಿಸಿಕೊಳ್ಳಬೇಕು. ಬಸ್ ಹತ್ತುವ ಮೊದಲು ಪೋರ್ಟಲ್ ನಲ್ಲಿ ನೋಂದಾಯಿಸಿಕೊಂಡ ಪುರಾವೆಯನ್ನು ಸಾರಿಗೆ ನಿಗಮದ ಸಿಬ್ಬಂದಿಗೆ ತೋರಿಸಬೇಕಿದೆ. ಎಲ್ಲಾ ಪ್ರಯಾಣಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕಿದೆ. ಈ ಮಾರ್ಗಗಳಲ್ಲಿ ಮುಂಗಡ ಸೀಟು ಕಾಯ್ದಿರಿಸಲು ಕೆಎಸ್ಆರ್ಟಿಸಿ ವೆಬ್ ಸೈಟ್ www.ksrtc.in ಮತ್ತು ನಿಗಮದ/ ಫ್ರಾಂಚೈಸಿ ಕೌಂಟರ್ ಗಳ ಮೂಲಕ ಸೀಟು ಕಾಯ್ದಿರಿಸಿಕೊಳ್ಳಬಹುದಾಗಿದೆ.